image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಮಾರಧಾರಾ ತೀರದಲ್ಲಿ ಕಾಡಾನೆಗಳ ಹಿಂಡು – ಸಾರ್ವಜನಿಕರಿಗೆ ಎಚ್ಚರಿಕೆ

ಕುಮಾರಧಾರಾ ತೀರದಲ್ಲಿ ಕಾಡಾನೆಗಳ ಹಿಂಡು – ಸಾರ್ವಜನಿಕರಿಗೆ ಎಚ್ಚರಿಕೆ

ಕಡಬ: ಕಡಬ ತಾಲೂಕಿನ 102-ನೆಕ್ಕಿಲಾಡಿ ಗ್ರಾಮದ ಕೋರಿಯರ್ ಸಮೀಪದ ಕುಮಾರಧಾರಾ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದು ಇಂದು ಬೆಳಗ್ಗೆ ವರದಿಯಾಗಿದೆ.

ನಿನ್ನೆ ರಾತ್ರಿ ಪಂಜೋಡಿ ಭಾಗದಿಂದ ಬಂದ ಕಾಡಾನೆಗಳು, ನೀಶಿತ್ ಮಾಯಿಪಾಜೆ ಅವರ ತೋಟಕ್ಕೆ ದಾಳಿ ನಡೆಸಿ ತೆಂಗು ಹಾಗೂ ಅಡಿಕೆ ಮರಗಳಿಗೆ ಹಾನಿ ಉಂಟುಮಾಡಿವೆ. ಇದೇ ವೇಳೆ ಕೋರಿಯರ್ ನಿವಾಸಿ ಹರೀಶ್ ಅವರಿಗೆ ಸೇರಿದ ಸುಮಾರು 25 ಅಡಿಕೆ ಮರಗಳು ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿರುವುದಾಗಿ ತಿಳಿದುಬಂದಿದೆ. ಬಳಿಕ ಕಾಡಾನೆಗಳು ಕೆರ್ಮಯಿ ತಮಿಳ್ ಕಾಲೋನಿ ಸಮೀಪ ಬೆಳಿಗ್ಗೆ ಕಾಣಿಸಿಕೊಂಡು, ನಂತರ ಕುಮಾರಧಾರಾ ನದಿಯತ್ತ ಚಲಿಸಿ, ಇದೀಗ ಮೇಲ್ಭಾಗದ ಮಾಯಿಪಾಜೆ ಸಮೀಪ ತಂಗಿವೆ.
ಒಟ್ಟು 7 ಕಾಡಾನೆಗಳು ಹಾಗೂ ಒಂದು ಮರಿಯನೆ ಸೇರಿ ಗುಂಪಾಗಿ ಸಂಚರಿಸುತ್ತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರಲ್ಲಿ ಆತಂಕ ಉಂಟಾಗಿದೆ.

ಆನೆ ಹಿಂಡಿನ ವಿಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಷಯ ತಿಳಿಯುತ್ತಿದ್ದಂತೆ ಸುಬ್ರಹ್ಮಣ್ಯ ಮತ್ತು ಪಂಜ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರಬ್ಬರ್ ನಿಗಮದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದೋಬಸ್ತ್ ಕೈಗೊಂಡಿದ್ದಾರೆ. ಕಾಡಾನೆಗಳ ಚಲನವಲನವನ್ನು ನಿಗಾವಹಿಸಿ, ಅವುಗಳನ್ನು ಸುರಕ್ಷಿತವಾಗಿ ಅರಣ್ಯದತ್ತ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮುಂದುವರಿದಿದೆ.
ಅರಣ್ಯ ಇಲಾಖೆಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕರು ಕಾಡಾನೆಗಳ ಹತ್ತಿರ ಹೋಗದಂತೆ, ಫೋಟೋ ಅಥವಾ ವಿಡಿಯೋ ತೆಗೆಯಲು ಯತ್ನಿಸದಂತೆ ಹಾಗೂ ರಾತ್ರಿ ವೇಳೆಯಲ್ಲಿ ಅನಾವಶ್ಯಕ ಸಂಚಾರ ತಪ್ಪಿಸಿಕೊಳ್ಳುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಯಾವುದೇ ಅನಾಹುತ ಸಂಭವಿಸಿದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ನಿಯೋಜನೆಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ