image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಂಆರ್‌ಪಿಎಲ್‌ ಸಿಎಸ್‌ಆರ್ ನಿಧಿ ಬಿಡುಗಡೆ: ಶಾಸಕ ಮಂಜುನಾಥ ಭಂಡಾರಿ ಪ್ರಯತ್ನಕ್ಕೆ ಸಂದ ಜಯ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಂಆರ್‌ಪಿಎಲ್‌ ಸಿಎಸ್‌ಆರ್ ನಿಧಿ ಬಿಡುಗಡೆ: ಶಾಸಕ ಮಂಜುನಾಥ ಭಂಡಾರಿ ಪ್ರಯತ್ನಕ್ಕೆ ಸಂದ ಜಯ

ಮಂಗಳೂರು: ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ವೃದ್ಧಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ ಭಂಡಾರಿ ಅವರು ನಡೆಸಿದ ನಿರಂತರ ಶ್ರಮಕ್ಕೆ ಮಹತ್ವದ ಯಶಸ್ಸು ಸಿಕ್ಕಿದೆ. ಶಾಸಕರ ವಿಶೇಷ ಶಿಫಾರಸ್ಸನ್ನು ಮಾನ್ಯ ಮಾಡಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯು, ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯಡಿ ಕೋಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದೆ.

​ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಪೂರಕವಾಗಿ ತರಗತಿ ಕೊಠಡಿಗಳಿಲ್ಲದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕರು, ಸ್ವತಃ ಸ್ಥಳ ಪರಿಶೀಲನೆ ನಡೆಸಿ ಎಂಆರ್‌ಪಿಎಲ್‌ ಆಡಳಿತ ಮಂಡಳಿಗೆ ವಿಶೇಷ ಅನುದಾನ ನೀಡುವಂತೆ ಪತ್ರ ಬರೆದು ಒತ್ತಾಯಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಂಸ್ಥೆಯು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುನಿಯಾಲು ಕೆಪಿಎಸ್ ಶಾಲೆಗೆ ₹95 ಲಕ್ಷ, ಹೆಬ್ರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ₹95 ಲಕ್ಷ ಹಾಗೂ ಹೆಬ್ರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ₹78.80 ಲಕ್ಷ ಮಂಜೂರು ಮಾಡಿದೆ. ಅಲ್ಲದೆ ಬಜಗೋಳಿ, ಸಿದ್ದಾಪುರ ಮತ್ತು ಬಸರೂರು ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ₹78.80 ಲಕ್ಷದಂತೆ ಒಟ್ಟು ₹2.36 ಕೋಟಿಗೂ ಅಧಿಕ ಅನುದಾನ ದೊರೆತಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣ ನಿರ್ಮಾಣಕ್ಕೆ ₹92 ಲಕ್ಷ ಹಾಗೂ ಹೊಸ ಕೊಠಡಿಗಳ ನಿರ್ಮಾಣಕ್ಕೆ ₹40 ಲಕ್ಷ ಮೀಸಲಿಡಲಾಗಿದೆ. ವಾಮದಪದವು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ₹80 ಲಕ್ಷ ಅನುದಾನ ಒದಗಿಸಲಾಗಿದೆ. ಶೈಕ್ಷಣಿಕ ಸುಧಾರಣೆಯ ಮೇಲೆ ದೂರದೃಷ್ಟಿ ಹೊಂದಿರುವ ಶಾಸಕ ಮಂಜುನಾಥ ಭಂಡಾರಿ ಅವರ ಕಾರ್ಯದಕ್ಷತೆ ಮತ್ತು ಎಂಆರ್‌ಪಿಎಲ್‌ ಸಂಸ್ಥೆಯ ಈ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮುಖಪುಟವೇ ಬದಲಾಗಲಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ವಾತಾವರಣ ನಿರ್ಮಾಣವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ