ಮಂಗಳೂರು: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಹೊಸಬೆಟ್ಟು ನಿವಾಸಿಗಳಾದ ಸುರೇಶ್ ಕರ್ಕೇರ ಮತ್ತು ಶಕುಂತಲಾ ದಂಪತಿಗಳ ಅವಳಿ ಪುತ್ರಿಯರು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅವಳಿ ಸಹೋದರಿಯರಾದ ವೈಭವಿ ಎಸ್. ಕರ್ಕೇರ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 2ನೇ ರ‍್ಯಾಂಕ್ ಗಳಿಸಿದ್ದರೆ, ವೈಷ್ಣವಿ ಎಸ್. ಕರ್ಕೇರ 590 ಅಂಕಗಳನ್ನು ಪಡೆಯುವ ಮೂಲಕ 10ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿಯರ ಈ ಅಮೋಘ ಸಾಧನೆಯನ್ನು ಗುರುತಿಸಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಇಂದು ವಿದ್ಯಾರ್ಥಿನಿಯರ ನಿವಾಸಕ್ಕೆ ಭೇಟಿ ನೀಡಿದರು. ಸಾಧಕ ವಿದ್ಯಾರ್ಥಿನಿಯರನ್ನು ಗೌರವಿಸಿ, ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹೊಸಬೆಟ್ಟು ಗಂಗಾಧರ ಗುರಿಕಾರ, ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಶರತ್ ಎಲ್. ಕರ್ಕೇರ, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ದಿನಕರ್ ಇಡ್ಯಾ, ಸುನೀಲ್ ಕುಳಾಯಿ, ಮಂಡಲ ಕಾರ್ಯದರ್ಶಿ ಪುಷ್ಪರಾಜ್ ಮುಕ್ಕ, ನಿಕಟಪೂರ್ವ ಮನಪಾ ಸದಸ್ಯರಾದ ಶೋಭಾ ರಾಜೇಶ್, ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ವಾರ್ಡ್ ಅಧ್ಯಕ್ಷ ರಾಜೇಶ್ ಮುಕ್ಕ, ಕಾರ್ಯದರ್ಶಿ ಅನಂತ್ ರಾಜ್ ಹಾಗೂ ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.