image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಕಡಿಮೆ ವೆಚ್ಚದ ಮೌಲೇಜ್ ತಯಾರಿಕೆ' ಕುರಿತು "ಕ್ರಾಫ್ಟಿಂಗ್ ಕ್ಲಿನಿಕಲ್ ರಿಯಲಿಸಂ" ಎಂಬ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ

'ಕಡಿಮೆ ವೆಚ್ಚದ ಮೌಲೇಜ್ ತಯಾರಿಕೆ' ಕುರಿತು "ಕ್ರಾಫ್ಟಿಂಗ್ ಕ್ಲಿನಿಕಲ್ ರಿಯಲಿಸಂ" ಎಂಬ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ

ಮಂಗಳೂರು : ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಘಟಕಗಳಾದ ತುಂಬೆಯ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಮತ್ತು ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಸ್ಕಿಲ್ ಸೆಂಟರ್ ಸಹಯೋಗದೊಂದಿಗೆ, 'ಕಡಿಮೆ ವೆಚ್ಚದ ಮೌಲೇಜ್ ತಯಾರಿಕೆ' (Low-Cost Moulage Preparation) ಕುರಿತು "ಕ್ರಾಫ್ಟಿಂಗ್ ಕ್ಲಿನಿಕಲ್ ರಿಯಲಿಸಂ" ಎಂಬ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು 2026ರ ಏಪ್ರಿಲ್ 10 ರಂದು ಕಂಕನಾಡಿಯ ಮುಲ್ಲರ್ ಮಿನಿ ಹಾಲ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಾಗಾರವು ಫಾದರ್ ಮುಲ್ಲರ್ ಸಿಮ್ಯುಲೇಶನ್ ಲ್ಯಾಬ್‌ನ 10ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಹಿಂದೆ ಏಮ್ಸ್ ಗುವಾಹಟಿಯಲ್ಲಿ ನಡೆದಿದ್ದ ಮೊದಲ ಸ್ವತಂತ್ರ ಮೌಲೇಜ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳೇ ಇಲ್ಲೂ ಭಾಗವಹಿಸಿದ್ದು, ದೇಶದಲ್ಲೇ ಎರಡನೇ ಬಾರಿಗೆ ಇಂತಹ ಸ್ವತಂತ್ರ ಕಾರ್ಯಾಗಾರ ನಡೆದಂತಾಗಿದೆ.

​ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಎಫ್.ಎಂ.ಸಿ.ಐ ನಿರ್ದೇಶಕರಾದ ವಂ| ಫಾ| ಫಾಸ್ಟಿನ್ ಲೂಕಾಸ್ ಲೋಬೋ, ಎಫ್.ಎಂ.ಎನ್.ಸಿ.ಟಿ ಆಡಳಿತಾಧಿಕಾರಿ ವಂ| ಫಾ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಮುಖ್ಯ ಅತಿಥಿ ಡಾ. ದಿನಕರ್ ಪೈ, ಗೌರವಾನ್ವಿತ ಅತಿಥಿ ಶ್ರೀ ಹೇಮಂತ್, ಸಂಘಟನಾ ಅಧ್ಯಕ್ಷೆ ಡಾ. ರೀನಾ ವಿಲ್ಮಾ ಫ್ರಾಂಕ್ ಮತ್ತು ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸಿಲ್ವಿಯಾ ನಿಶಾ ಲೋಬೋ ಅವರು ಸಾಂಪ್ರದಾಯಿಕ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಡಾ. ರೀನಾ ವಿಲ್ಮಾ ಫ್ರಾಂಕ್ ಸ್ವಾಗತಿಸಿದರು, ಶ್ರೀಮತಿ ಜಾಯ್ಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ಸಿಲ್ವಿಯಾ ನಿಶಾ ಲೋಬೋ ವಂದಿಸಿದರು.

​ಮುಖ್ಯ ಅತಿಥಿ ಡಾ. ದಿನಕರ್ ಪೈ ಮಾತನಾಡಿ, ಆರೋಗ್ಯ ಶಿಕ್ಷಣದಲ್ಲಿ ಸಿಮ್ಯುಲೇಶನ್ ಪ್ರಾಮುಖ್ಯತೆ ಹೆಚ್ಚುತ್ತಿದ್ದು, ರೋಗಿಗಳ ಸುರಕ್ಷತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲವನ್ನು ಸುಧಾರಿಸಲು ಇಂತಹ ತರಬೇತಿಗಳು ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ವಂ| ಫಾ| ಫಾಸ್ಟಿನ್ ಲೂಕಾಸ್ ಲೋಬೋ ಅವರು, ನೈಜ ವೈದ್ಯಕೀಯ ಸನ್ನಿವೇಶಗಳನ್ನು ಎದುರಿಸಲು ಆರೋಗ್ಯ ವೃತ್ತಿಪರರನ್ನು ಸಜ್ಜುಗೊಳಿಸುವಲ್ಲಿ 'ಮೌಲೇಜ್' (ಕೃತಕ ಗಾಯಗಳ ಚಿತ್ರಣ) ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದು ತಿಳಿಸಿದರು.

​ಈ ಕಾರ್ಯಾಗಾರದಲ್ಲಿ ಪುದುಚೇರಿಯ ಶ್ರೀ ಬಾಲಾಜಿ ವಿದ್ಯಾಪೀಠದ ವೈದ್ಯಕೀಯ ಸಿಮ್ಯುಲೇಶನ್ ಕೇಂದ್ರದ ನಿರ್ದೇಶಕ ಡಾ. ದಿನಕರ್ ಪೈ, ಏಮ್ಸ್ ರಿಷಿಕೇಶದ ಸುಧಾರಿತ ವೈದ್ಯಕೀಯ ಸಿಮ್ಯುಲೇಶನ್ ಮತ್ತು ಕೌಶಲ ಕೇಂದ್ರದ ಶ್ರೀ ಹೇಮಂತ್ ಮತ್ತು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ ಡಾ. ಲೂಲು ಶರೀಫ್ ಮಹಮೂದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

​ಕಾರ್ಯಾಗಾರದಲ್ಲಿ ರಕ್ತ, ಕೀವು, ವಾಂತಿ, ಕಫ ಮುಂತಾದ ದ್ರವಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವುದು ಹಾಗೂ ಕೃತಕ ಗಾಯಗಳು, ಸುಟ್ಟ ಗಾಯಗಳು ಮತ್ತು ಚರ್ಮದ ಕಾಯಿಲೆಗಳನ್ನು ಮೌಲೇಜ್ ಮೂಲಕ ಹೇಗೆ ನೈಜವಾಗಿ ಬಿಂಬಿಸುವುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಯಿತು. ನಂತರ ನಡೆದ "ಮೌಲೇಜ್ ವಾರ್ - ಬ್ಯಾಟಲ್ ಆಫ್ ರಿಯಲಿಸಂ" ಸ್ಪರ್ಧೆಯಲ್ಲಿ ಭಾಗವಹಿಸಿದವರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಟೆಕ್4ಎಚ್‌ಸಿ (tech4hc) ಕಂಪನಿಯ ಶ್ರೀ ತಪ ಭಟ್ಟಾಚಾರ್ಯ ಅವರು ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಸಹಕರಿಸಿದರು. ದೇಶದ ವಿವಿಧ ಭಾಗಗಳ ನೂರಾರು ಶಿಕ್ಷಕರು ಮತ್ತು ತಂತ್ರಜ್ಞರು ಈ ಕಾರ್ಯಾಗಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮ ಸುಸಂಪನ್ನಗೊಂಡಿತು.

Category
ಕರಾವಳಿ ತರಂಗಿಣಿ