image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂಲ್ಕಿ-ಹೆಜಮಾಡಿಯಲ್ಲಿ ಜಿಪಿಎಲ್ ಉತ್ಸವದ ದಶಮಾನೋತ್ಸವ ಸಂಭ್ರಮ: ಏಪ್ರಿಲ್ 10ರಿಂದ 12ರವರೆಗೆ ಕ್ರಿಕೆಟ್ ಹಾಗೂ ಸಾಂಸ್ಕೃತಿಕ ಹಬ್ಬ

ಮೂಲ್ಕಿ-ಹೆಜಮಾಡಿಯಲ್ಲಿ ಜಿಪಿಎಲ್ ಉತ್ಸವದ ದಶಮಾನೋತ್ಸವ ಸಂಭ್ರಮ: ಏಪ್ರಿಲ್ 10ರಿಂದ 12ರವರೆಗೆ ಕ್ರಿಕೆಟ್ ಹಾಗೂ ಸಾಂಸ್ಕೃತಿಕ ಹಬ್ಬ

ಮಂಗಳೂರು : ಮೂಲ್ಕಿ - ಹೆಜಮಾಡಿಯಲ್ಲಿ ಜಿಪಿಎಲ್ ಉತ್ಸವದ ದಶಮಾನೋತ್ಸವ ಸಂಭ್ರಮವು ಏಪ್ರಿಲ್ 10 ರಿಂದ 12 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಗೌಡ ಸಾರಸ್ವತ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವ ಸುಂದರ ಉದ್ದೇಶದೊಂದಿಗೆ 2017ರಲ್ಲಿ ಆರಂಭವಾದ 'ಜಿಪಿಎಲ್ ಉತ್ಸವ'ವು ಇದೀಗ ಯಶಸ್ವಿ ಹತ್ತನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ 'ದಿ ಒರಿಜಿನಲ್ ಆಭರಣ ಜಿಪಿಎಲ್ ಉತ್ಸವ 2026' ಎಂಬ ಹೆಸರಿನಲ್ಲಿ ಶಾನುಭೋಗ್ ಕುದುವಿನಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ತಡರಾತ್ರಿಯವರೆಗೆ ನಿರಂತರವಾಗಿ ಕ್ರಿಕೆಟ್ ಮತ್ತು ವಿವಿಧ ಸಾಂಸ್ಕೃತಿಕ ಹಬ್ಬಗಳು ಜರುಗಲಿವೆ ಎಂದು ಕಿರಣ್ ಶೆಣೈ ಹೇಳಿದರು.

ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಜಿ.ಎಸ್.ಬಿ ಸಮಾಜದ ಕ್ರೀಡಾಪಟುಗಳನ್ನೊಳಗೊಂಡ 16 ತಂಡಗಳು ಪ್ರತಿಷ್ಠಿತ ಜಿಪಿಎಲ್ ಕಪ್‌ಗಾಗಿ ಹೊಸ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಹೊನಲು ಬೆಳಕಿನ ಈ ಕ್ರಿಕೆಟ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಆಟಗಾರನಿಗೆ ಹೊಸ ಬೈಕ್ ಬಹುಮಾನವಾಗಿ ನೀಡಲಾಗುವುದು. ಫೈನಲ್ ಪಂದ್ಯದಲ್ಲಿ ಗೆದ್ದ ಹಾಗೂ ರನ್ನರ್ ಅಪ್ ತಂಡಗಳಿಗೆ ನಗದು ಹಣದ ಜೊತೆಗೆ ಆಕರ್ಷಕ ಟ್ರೋಫಿ ಮತ್ತು ಪದಕಗಳನ್ನು ನೀಡಿ ಗೌರವಿಸಲಾಗುವುದು.

​ಈ ಉತ್ಸವವು ಕೇವಲ ಕ್ರಿಕೆಟ್‌ಗೆ ಸೀಮಿತವಾಗದೆ ಕುಟುಂಬದ ಪ್ರತಿಯೊಬ್ಬರಿಗೂ ಮನರಂಜನೆ ನೀಡುವ ವೇದಿಕೆಯಾಗಿದೆ. ಇಲ್ಲಿನ ಫುಡ್ ಕೋರ್ಟ್‌ನಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ವೈವಿಧ್ಯಮಯ ಸಸ್ಯಾಹಾರಿ ಖಾದ್ಯಗಳು ಹಾಗೂ ಕಾಶ್ಮೀರದ ವಿಶೇಷ ಪಾನೀಯಗಳು ಲಭ್ಯವಿರುತ್ತವೆ. ಶಾಂಭವಿ ನದಿಯ ತಟದಲ್ಲಿ ನಡೆಯುವ ಈ ಉತ್ಸವದಲ್ಲಿ ಸ್ಪೀಡ್ ಬೋಟ್, ಫ್ಯಾಮಿಲಿ ಬೋಟ್ ಹಾಗೂ ಕಯಾಕಿಂಗ್ ಸೌಲಭ್ಯವಿದ್ದು, ಹರಿದ್ವಾರದ ಮಾದರಿಯಲ್ಲಿ 'ಶಾಂಭವಿ ಆರತಿ' ವಿಶೇಷ ಆಕರ್ಷಣೆಯಾಗಿರಲಿದೆ. ಮಕ್ಕಳಿಗಾಗಿ ಪ್ರತ್ಯೇಕ ಕಿಡ್ಸ್ ಜೋನ್, ಒಂಟೆ ಮತ್ತು ಕುದುರೆ ಸವಾರಿ ಹಾಗೂ ಕುಟುಂಬದವರಿಗಾಗಿ ವಾಟರ್ ಗ್ಲಾಸ್ ಬ್ಯಾಲೆನ್ಸ್, ಮ್ಯೂಸಿಕಲ್ ಮೆಮೊರಿ ಸೇರಿದಂತೆ 20ಕ್ಕೂ ಹೆಚ್ಚು ಆಟಗಳ 'ಜಿಪಿಎಲ್ ಕ್ರೀಡಾ ಕಾರ್ನಿವಲ್' ಇರಲಿದೆ.

​ವಿಶೇಷವಾಗಿ ಸಾಕುಪ್ರಾಣಿಗಳಿಗಾಗಿ 'ಪೆಟ್ ಶೋ' ಮತ್ತು ಹರಟೆ, ಕವಿಗೋಷ್ಠಿಗಳಿಗಾಗಿ 'ಪಂಚಾಯಿತಿ ಕಟ್ಟೆ'ಯನ್ನು ನಿರ್ಮಿಸಲಾಗಿದೆ. ಸಮಾಜದ ಬಂಧುಗಳು ತಯಾರಿಸಿದ ಗೃಹ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ 100ಕ್ಕೂ ಹೆಚ್ಚು ಸ್ಟಾಲ್‌ಗಳ 'ಫ್ರೀ ಮಾರುಕಟ್ಟೆ' ವ್ಯವಸ್ಥೆ ಮಾಡಲಾಗಿದೆ. ಬೃಹತ್ ವೇದಿಕೆಯಲ್ಲಿ ಭರತನಾಟ್ಯ, ಸಂಗೀತ ಕಛೇರಿ, ಜಿಂಬೆ ಸಂಗೀತ ಮತ್ತು ಕುಳ್ಳಪ್ಪು ತಂಡದಿಂದ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿವೆ. ಇದೇ ಸಂದರ್ಭದಲ್ಲಿ '2026ನೇ ಸಾಲಿನ ವರ್ಷದ ವ್ಯಕ್ತಿ' ಪ್ರಶಸ್ತಿ ಪ್ರದಾನವೂ ನಡೆಯಲಿದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಗೋಪಾಲ್ ಕೃಷ್ಣ ಭಟ್, ರಜತ್ ಭಂಡಾರ್ಕರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ