image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಚಾಕೊಲೇಟ್ ಹಬ್ಬದ ಸಂಭ್ರಮ: ಏಪ್ರಿಲ್ 11 ಮತ್ತು 12 ರಂದು 'ಚಾಕೊಲೇಟ್ ಸ್ಟ್ರೀಟ್' 7ನೇ ಆವೃತ್ತಿ

ಮಂಗಳೂರಿನಲ್ಲಿ ಚಾಕೊಲೇಟ್ ಹಬ್ಬದ ಸಂಭ್ರಮ: ಏಪ್ರಿಲ್ 11 ಮತ್ತು 12 ರಂದು 'ಚಾಕೊಲೇಟ್ ಸ್ಟ್ರೀಟ್' 7ನೇ ಆವೃತ್ತಿ

ಮಂಗಳೂರು : ಮಂಗಳೂರಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (NICO), ನಗರದ ಅತಿದೊಡ್ಡ ಚಾಕೊಲೇಟ್ ಉತ್ಸವ 'ಚಾಕೊಲೇಟ್ ಸ್ಟ್ರೀಟ್'ನ 7ನೇ ಆವೃತ್ತಿಯನ್ನು 2026ರ ಏಪ್ರಿಲ್ 11 ಮತ್ತು 12 ರಂದು ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆಯೋಜಿಸಿದೆ. ಬಿ.ಎ. ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳೇ ಸಂಪೂರ್ಣವಾಗಿ ರೂಪಿಸಿ ನಿರ್ವಹಿಸುತ್ತಿರುವ ಈ ವಿಶಿಷ್ಟ ಮೇಳವು, ಸ್ಥಳೀಯ ಹೋಮ್ ಬೇಖರ್ಸ್, ಚಾಕೊಲೇಟ್ ತಯಾರಕರು ಮತ್ತು ನವೋದ್ಯಮಿಗಳಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಹಾಗೂ ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

​ಈ ಎರಡು ದಿನಗಳ ಸಂಭ್ರಮವು ಕೇವಲ ಚಾಕೊಲೇಟ್ ಮಾರಾಟಕ್ಕಷ್ಟೇ ಸೀಮಿತವಾಗದೆ, ಉದ್ಯಮಶೀಲತೆ ಮತ್ತು ಕಲಾತ್ಮಕತೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ. ಮೇಳದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಮನರಂಜನೆಗಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಉದಯೋನ್ಮುಖ ಕಲಾವಿದರಿಗಾಗಿ 'ಓಪನ್ ಮೈಕ್' ಸೆಷನ್‌ಗಳು ವಿಶೇಷ ಆಕರ್ಷಣೆಯಾಗಿರಲಿವೆ. ಈ ಬಾರಿಯ ಉತ್ಸವದ ಮ್ಯಾಸ್ಕಾಟ್ 'ಬೆನ್ನಿ' ಕಾರ್ಯಕ್ರಮದ ಕಳೆ ಹೆಚ್ಚಿಸಲಿದ್ದಾನೆ.

​ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಎಂ.ಎಸ್. ಮೂಡಿತಾಯ ಮತ್ತು ರಿಜಿಸ್ಟ್ರಾರ್ ಡಾ. ಹರ್ಷ ಹಾಲಹಳ್ಳಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಕೃಷಿಕರ ಏಳಿಗೆಗಾಗಿ ಶ್ರಮಿಸುತ್ತಿರುವ ಭಾರತದ ಮುಂಚೂಣಿ ಸಹಕಾರಿ ಸಂಸ್ಥೆ 'ಕ್ಯಾಂಪ್ಕೋ' (CAMPCO) ಈ ಉತ್ಸವದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

​ಏಪ್ರಿಲ್ 11 ರಂದು ಬೆಳಿಗ್ಗೆ 10:30ಕ್ಕೆ ಸೊಲ್ಮೆಲು ಚಾಕೊಲೇಟ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮಯೂರ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮೇಳವನ್ನು ಉದ್ಘಾಟಿಸಲಿದ್ದಾರೆ. 2012ರಲ್ಲಿ ಸ್ಥಾಪನೆಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಮೂಲಸೌಕರ್ಯ ಹಾಗೂ ಶಿಕ್ಷಣ ನೀಡುತ್ತಿರುವ NICO ಸಂಸ್ಥೆಯು, ಈ ನವೀನ ಚಾಕೊಲೇಟ್ ಸಂಭ್ರಮಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಿದೆ.

Category
ಕರಾವಳಿ ತರಂಗಿಣಿ