ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ಶ್ರೀ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶ್ರೀ ಡಿ.ವೇದವ್ಯಾಸ್ ಕಾಮತ್ ರವರ ನೇತೃತ್ವದೊಂದಿಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಇದೇ ಅ.11 ಶುಕ್ರವಾರದಂದು ನಡೆಯಲಿರುವ "ಪಿಲಿ ಪರ್ಬ-2024, ಸೀಸನ್ 3" ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆಯಿತು.
ಕಳೆದೆರಡು ಆವೃತ್ತಿಯ ಪಿಲಿಪರ್ಬಕ್ಕೆ ತುಳುನಾಡ ಮಹಾಜನತೆಯಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು ಇದೀಗ ಮೂರನೇ ಆವೃತ್ತಿಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಜಿಲ್ಲೆಯ ಹೆಸರಾಂತ ಹುಲಿವೇಷ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಅತ್ಯುತ್ತಮ ಪ್ರದರ್ಶನದ ಮೂಲಕ ಈ ಬಾರಿಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ತಂಡ ಯಾವುದು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ತುಳುನಾಡ ಮಣ್ಣಿನ ಈ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುವುದರ ಜೊತೆಗೆ ದಸರಾ ಹಬ್ಬದ ಸಂಭ್ರಮವನ್ನು ಸವಿಯಲು ನೀವೂ ಬನ್ನಿ, ನಿಮ್ಮ ಬಂಧು ಮಿತ್ರರನ್ನೂ ಕರೆ ತನ್ನಿ ಎಂದು ಕಾರ್ಯಕ್ರಮದ ಆಯೋಜಕರು ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ರಾಘವೇಂದ್ರ ಹೊಳ್ಳ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಚೇತನ್ ಕಾಮತ್, ಅಶ್ವಿತ್ ಕೊಟ್ಟಾರಿ, ಸತೀಶ್, ಮೊದಲಾದವರು ಉಪಸ್ಥಿತರಿದ್ದರು.