image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ: ಏಪ್ರಿಲ್ 10 ರಂದು ಮುಹೂರ್ತ

ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ: ಏಪ್ರಿಲ್ 10 ರಂದು ಮುಹೂರ್ತ

ಮಂಗಳೂರು: ತನ್ನ ಅಸ್ತಿತ್ವದ 40ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಕೊಂಕಣಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆ 'ಮಾಂಡ್ ಸೊಭಾಣ್', ಕೊಂಕಣಿ ಸಾಂಸ್ಕೃತಿಕ ಲೋಕದ ಇತಿಹಾಸದಲ್ಲೇ ಮೈಲಿಗಲ್ಲಾಗಲಿರುವ 'ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ'ವನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ನವೆಂಬರ್ 03 ರಿಂದ 15 ರವರೆಗೆ ಮಂಗಳೂರಿನಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶದ ಮುಹೂರ್ತ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮವು ಇದೇ ಶುಕ್ರವಾರ, ಏಪ್ರಿಲ್ 10 ರಂದು ಸಂಜೆ 4:00 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಲಿದೆ ಎಂದು  ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಜೆ. ಪಿಂಟೊ, ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ದಿನೇಶ್ ಗುಂಡೂರಾವ್ ಲಾಂಛನವನ್ನು ಬಿಡುಗಡೆಗೊಳಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು.

ಈ ಮಹಾ ಸಮಾವೇಶದ ಪ್ರಮುಖ ಆಕರ್ಷಣೆಯೆಂದರೆ 'ಗಿನ್ನೆಸ್ ದಾಖಲೆ'ಯ ಪ್ರಯತ್ನ. ಸತತ 12 ದಿನ, 12 ಗಂಟೆ, 12 ನಿಮಿಷಗಳ ಕಾಲ ಸಮೂಹ ಗಾಯನ ನಡೆಸುವ ಮೂಲಕ ಅತೀ ದೀರ್ಘ ಅವಧಿಯ ಸಂಗೀತ ಕಾರ್ಯಕ್ರಮ ಎಂಬ ವಿಶ್ವ ದಾಖಲೆ ನಿರ್ಮಿಸಲು ಮಾಂಡ್ ಸೊಭಾಣ್ ಗುರಿ ಇಟ್ಟುಕೊಂಡಿದೆ. ಈ ಐತಿಹಾಸಿಕ ಪ್ರಯತ್ನದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿದೇಶಗಳಿಂದಲೂ ಸುಮಾರು 6,000ಕ್ಕೂ ಹೆಚ್ಚು ಹಾಡುಗಾರರು ಪಾಲ್ಗೊಳ್ಳಲಿದ್ದಾರೆ.

ಕ್ರೈಸ್ತ, ಜಿಎಸ್‌ಬಿ, ದಾಲ್ದಿ, ಕುಡ್ಮಿ, ಖಾರ್ವಿ ಸೇರಿದಂತೆ ಕೊಂಕಣಿಯ ವಿವಿಧ ಸಮುದಾಯಗಳ ಗಾಯಕರು ಒಟ್ಟು 5,000 ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಕೊಂಕಣಿ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ ಎರಿಕ್ ಒಝೇರಿಯೊ ಅವರಿಗೆ ಅರ್ಪಣೆಯಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇವಲ ಸಂಗೀತವಷ್ಟೇ ಅಲ್ಲದೆ, ಸಂವಾದ ಗೋಷ್ಠಿಗಳು, ಹಿರಿಯ ಸಾಧಕರಿಗೆ ಸನ್ಮಾನ, ಕೀರ್ತಿ ಮಂದಿರ ಹಾಗೂ ಸಂಗೀತ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಸ್ತುಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ  ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ