image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಂತ್ರಜ್ಞಾನದ ನಡುವೆಯೂ ಚಿಂತನಾ ಶಕ್ತಿ ಮತ್ತು ಸ್ಮರಣಶಕ್ತಿ ಉಳಿಸಿಕೊಳ್ಳಿ: ಅತುಲ್ ಭಟ್ ಕರೆ

ತಂತ್ರಜ್ಞಾನದ ನಡುವೆಯೂ ಚಿಂತನಾ ಶಕ್ತಿ ಮತ್ತು ಸ್ಮರಣಶಕ್ತಿ ಉಳಿಸಿಕೊಳ್ಳಿ: ಅತುಲ್ ಭಟ್ ಕರೆ

ಮೂಡುಬಿದಿರೆ: ಇಂದಿನ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರದಲ್ಲೇ ಅಪಾರ ಮಾಹಿತಿಯಿದ್ದು, ಅದನ್ನು ಅರಿಯಲು ಸದಾ ಮೊಬೈಲ್ ಅಥವಾ ಇಂಟರ್‌ನೆಟ್ ಅವಶ್ಯಕವಿಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕವೇ ಬಹಳಷ್ಟು ವಿಷಯಗಳನ್ನು ಕಲಿಯಬಹುದು ಎಂದು ಮಾಹೆಯ ಸೌರ ಭೌತಶಾಸ್ತ್ರ ಸಂಶೋಧಕ ಅತುಲ್ ಭಟ್ ಅಭಿಪ್ರಾಯಪಟ್ಟರು.

​ಮೂಡುಬಿದಿರೆಯ ಆಳ್ವಾಸ್ ಶಾಲೆಯು ಆಯೋಜಿಸಿದ್ದ ‘ಖಗೋಳಶಾಸ್ತ್ರ ಬೇಸಿಗೆ ಶಿಬಿರ ೨೦೨೬’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ವಿದ್ಯಾರ್ಥಿಗಳು ತಮ್ಮ ಸಹಜ ಚಿಂತನಾ ಶಕ್ತಿ ಮತ್ತು ನೆನಪಿನ ಸಾಮರ್ಥ್ಯವನ್ನು ಕಳೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದರು. ಹಿಂದೆ ಮೊಬೈಲ್‌ಗಳಿಲ್ಲದ ಕಾಲದಲ್ಲಿ ನಾವು ಅನೇಕ ದೂರವಾಣಿ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಇಂದು ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯಿಂದಾಗಿ ನೆನಪಿನ ಶಕ್ತಿ ಕುಂದುತ್ತಿದೆ ಎಂದು ಅವರು ವಿಷಾದಿಸಿದರು.

​ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಅತುಲ್ ಭಟ್, ಖಗೋಳಶಾಸ್ತ್ರ ಕಲಿಯಲು ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲೂ ಪರಿಶ್ರಮದಿಂದ ನಕ್ಷತ್ರಗಳನ್ನು ಗುರುತಿಸುತ್ತಿದ್ದೆವು. ಅಂತಹ ಪ್ರಯತ್ನವೇ ನಿಜವಾದ ಜ್ಞಾನವನ್ನು ನೀಡುತ್ತದೆ. ಈಗ ಮೊಬೈಲ್ ಆ್ಯಪ್‌ಗಳ ಮೂಲಕ ಸುಲಭವಾಗಿ ನಕ್ಷತ್ರಗಳನ್ನು ಗುರುತಿಸಬಹುದು, ಆದರೆ ಇದರಿಂದ ವಿಷಯವನ್ನು ಆಳವಾಗಿ ಅರಿಯುವ ಮತ್ತು ಕುತೂಹಲದಿಂದ ಅನ್ವೇಷಿಸುವ ಮನೋಭಾವ ಕಡಿಮೆಯಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಸ್ವತಃ ಆಕಾಶವನ್ನು ಗಮನಿಸಿ ನಕ್ಷತ್ರಗುಚ್ಛಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಅನ್ವೇಷಣಾ ಪ್ರವೃತ್ತಿ ಬೆಳೆಸಿಕೊಳ್ಳುವುದು ಉತ್ತಮ ಹವ್ಯಾಸ. ಆಕಾಶ ಮತ್ತು ಸಮುದ್ರದಲ್ಲಿ ಅನ್ವೇಷಿಸಲು ಇನ್ನೂ ಅಸಂಖ್ಯಾತ ವಿಷಯಗಳಿವೆ. ಭೂಭಾಗದಲ್ಲಿ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿದ್ದರೂ, ಪ್ರತಿಯೊಬ್ಬರಿಗೂ ಹೊಸತನ್ನು ಸಾಧಿಸಲು ಅಪಾರ ಅವಕಾಶಗಳಿವೆ. ಆ ಅವಕಾಶಗಳನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದರು.

​ಈ ಸಂದರ್ಭದಲ್ಲಿ ನಾಸಾ ವಿಜ್ಞಾನಿ ಪ್ರಕೃತಿ ಪ್ರಕಾಶ್ ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ಶೈಲಜಾ ಬೋಳ ಹೆಗ್ಡೆ, ಶಾಲಾ ಆಡಳಿತ ಅಧಿಕಾರಿ ನಿತೇಶ್ ಮಾರ್ನಾಡ್, ಸಹಾಯಕ ಆಡಳಿತ ಅಧಿಕಾರಿ ರಾಜೇಶ್, ಕಾರ್ಯಕ್ರಮ ಸಂಯೋಜಕರಾದ ಸೌಮ್ಯ ಆದಿತ್ಯ ಮತ್ತು ಅಶ್ವಿನಿ ಪ್ರಭು ಉಪಸ್ಥಿತರಿದ್ದರು. ನಿಶಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಜ್ಞಾನ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.

Category
ಕರಾವಳಿ ತರಂಗಿಣಿ