ಮಂಗಳೂರು: ಶತಮಾನೋತ್ತರ ಇತಿಹಾಸವಿರುವ ಎಂಸಿಸಿ ಬ್ಯಾಂಕ್ 2025-26ನೇ ಹಣಕಾಸು ವರ್ಷದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, 13 ಕೋಟಿ ರೂಪಾಯಿಗಳ ತೆರಿಗೆ ಪೂರ್ವ ಲಾಭವನ್ನು ದಾಖಲಿಸುವ ಮೂಲಕ ತನ್ನ 114ನೇ ವರ್ಷದ ಸೇವೆಯನ್ನು ಸ್ಮರಣೀಯವಾಗಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದರು. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಬ್ಯಾಂಕಿನ ಒಟ್ಟು ವ್ಯವಹಾರವು 1,525 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಶೇಕಡಾ 23ರಷ್ಟು ವೃದ್ಧಿ ಸಾಧಿಸಿದೆ ಎಂದರು. ಕಳೆದ ಏಳೂವರೆ ವರ್ಷಗಳಲ್ಲಿ ಬ್ಯಾಂಕಿನ ವಹಿವಾಟು ಮೂರು ಪಟ್ಟು ಹೆಚ್ಚಿರುವುದು ಬ್ಯಾಂಕಿನ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.
ಬ್ಯಾಂಕಿನ ಆರ್ಥಿಕ ಸ್ಥಿತಿಯು ಸುದೃಢವಾಗಿದ್ದು, ನಿವ್ವಳ ಎನ್‌ಪಿಎ (Net NPA) ಪ್ರಮಾಣವನ್ನು ಶೇಕಡಾ 1.25ಕ್ಕೆ ಇಳಿಸುವಲ್ಲಿ ಆಡಳಿತ ಮಂಡಳಿ ಯಶಸ್ವಿಯಾಗಿದೆ. ಪ್ರಸ್ತುತ 21 ಶಾಖೆಗಳನ್ನು ಹೊಂದಿರುವ ಬ್ಯಾಂಕ್, ಮುಂಬರುವ ವರ್ಷದಲ್ಲಿ ತನ್ನ ಜಾಲವನ್ನು ಇನ್ನಷ್ಟು ವಿಸ್ತರಿಸಲು ಸಜ್ಜಾಗಿದೆ. ಜೂನ್ ಅಂತ್ಯದೊಳಗೆ ದೇರಳಕಟ್ಟೆಯಲ್ಲಿ 22ನೇ ಶಾಖೆ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ 23ನೇ ಶಾಖೆಯನ್ನು ಆರಂಭಿಸಲು ಈಗಾಗಲೇ ಅನುಮತಿ ದೊರೆತಿದೆ. ಇದರೊಂದಿಗೆ ಮಾರ್ಚ್ 2027ರ ಅಂತ್ಯದೊಳಗೆ ವಾಮಂಜೂರು ಹಾಗೂ ಮಂಗಳೂರಿನಲ್ಲಿ ಹೊಸ ಶಾಖೆಗಳನ್ನು ತೆರೆಯುವ ಮೂಲಕ ಒಟ್ಟು ಶಾಖೆಗಳ ಸಂಖ್ಯೆಯನ್ನು 25ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ ಎನ್‌ಆರ್‌ಐ ಸೌಲಭ್ಯ ಹೊಂದಿರುವ ಎರಡನೇ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನೂ ಈ ಬ್ಯಾಂಕ್ ಪಡೆದಿದೆ.
ಡಿಜಿಟಲ್ ಬ್ಯಾಂಕಿಂಗ್‌ಗೆ ಹೆಚ್ಚಿನ ಒತ್ತು ನೀಡುತ್ತಿರುವ ಎಂಸಿಸಿ ಬ್ಯಾಂಕ್, ಪ್ರಸ್ತುತ 15 ಎಟಿಎಂಗಳನ್ನು ಹೊಂದಿದ್ದು, ಶೀಘ್ರದಲ್ಲೇ ಹೆಚ್ಚುವರಿ 3 ನಗದು ಠೇವಣಿ ಮತ್ತು ವಿತರಣಾ ಯಂತ್ರಗಳನ್ನು ಅಳವಡಿಸಲಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಮಾನವಾದ ಸ್ಪರ್ಧಾತ್ಮಕ ಸೇವೆಗಳನ್ನು ನೀಡುತ್ತಿದೆ ಎಂದರು.
ಎನ್‌ಆರ್‌ಐ ಗ್ರಾಹಕರ ಬೆಂಬಲ, ಸದಸ್ಯರ ವಿಶ್ವಾಸ ಮತ್ತು ಸಿಬ್ಬಂದಿಯ ಸಮರ್ಪಿತ ಸೇವೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಅಧ್ಯಕ್ಷರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರು ಹಾಗೂ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.