ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಹನುಮಗಿರಿಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ಹಾಗೂ ಶ್ರೀರಾಮಚಂದ್ರನ ದೇವಸ್ಥಾನದ ಪುನರುತ್ಥಾನ ಮತ್ತು ಬ್ರಹ್ಮಕಲಶೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಈ ಐತಿಹಾಸಿಕ ಸಂದರ್ಭದ ಅಂಗವಾಗಿ ಅಯೋಧ್ಯೆಯ ಬಾಲರಾಮನ ಮಂದಿರದಿಂದ ತರಲಾದ ಪವಿತ್ರ 'ರಾಮಜ್ಯೋತಿ'ಯು ಇಂದು ಹನುಮಗಿರಿ ಕ್ಷೇತ್ರಕ್ಕೆ ಭವ್ಯವಾಗಿ ಆಗಮಿಸಿದ್ದು, ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಅವರು ಹನುಮಗಿರಿ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಅಯೋಧ್ಯೆಯಿಂದ ಬಂದ ಈ ಜ್ಯೋತಿಯನ್ನು ಕೊಪ್ಪಳದ ಅಂಜನಾದ್ರಿಯಲ್ಲಿ ಹನುಮಂತನ ಜ್ಯೋತಿಯೊಂದಿಗೆ ವಿಲೀನಗೊಳಿಸಿ ತರಲಾಗಿದ್ದು, ಇದು ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಸಮಾಗಮದ ಸಂಕೇತವಾಗಿ ಗಮನ ಸೆಳೆದಿದೆ. ಜಾತಿ, ಮತ ಮತ್ತು ಪಂಥಗಳ ಭೇದವಿಲ್ಲದೆ ಸೌಹಾರ್ದತೆಯನ್ನು ಸಾರುವ ಉದ್ದೇಶದಿಂದ ಈ ರಾಮಜ್ಯೋತಿಯನ್ನು ಸುಳ್ಯ ಮತ್ತು ಪುತ್ತೂರು ತಾಲೂಕಿನ ಸುಮಾರು 30 ಗ್ರಾಮಗಳ 5,000ಕ್ಕೂ ಹೆಚ್ಚು ಮನೆಗಳಿಗೆ ತಲುಪಿಸುವ ಗುರಿ ಹೊಂದಲಾಗಿದ್ದು, ರಥಯಾತ್ರೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ವಾಗತ ಲಭಿಸಿದೆ. ಕ್ಷೇತ್ರದ ನವೀಕರಣದ ಭಾಗವಾಗಿ ಮಂದಿರದ ಗೋಪುರಗಳಿಗೆ ತಾಮ್ರದ ಹೊದಿಕೆ ಮತ್ತು ನೂತನ ವನ ನಿರ್ಮಾಣ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು, ಏಪ್ರಿಲ್ 9 ರಿಂದ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, 12ನೇ ತಾರೀಖಿನಂದು ಬ್ರಹ್ಮಕಲಶಭಿಷೇಕದೊಂದಿಗೆ ಪರಿಸಮಾಪ್ತಿ ಆಗಲಿದೆ ಎಂದರು.
ಆಂಜನೇಯ ಮತ್ತು ಶ್ರೀರಾಮನ ಆರಾಧನೆಯ ಜೊತೆಗೆ, ದೇಶದ ರಕ್ಷಣೆ ಮಾಡುವ ಸೈನಿಕರಿಗಾಗಿ 'ಭಾರತ ಮಾತೆ'ಯ ಮಂದಿರವನ್ನು ಹೊಂದಿರುವ ದೇಶದ ಮೊದಲ ಕ್ಷೇತ್ರ ಎಂಬ ಖ್ಯಾತಿಯ ಹನುಮಗಿರಿಯು, ಈ ಕಾರ್ಯಕ್ರಮದ ಮೂಲಕ "ಪ್ರಾಣಕ್ಕಿಂತ ದೇಶ ದೊಡ್ಡದು" ಎಂಬ ರಾಷ್ಟ್ರಭಕ್ತಿಯ ಸಂದೇಶವನ್ನು ಮನೆಮನೆಗೆ ತಲುಪಿಸಲು ಸಜ್ಜಾಗಿದೆ. ಈ ಅಪರೂಪದ ಧಾರ್ಮಿಕ ಉತ್ಸವಕ್ಕೆ ಸಾಕ್ಷಿಯಾಗಲು ಸಾವಿರಾರು ಭಕ್ತರು ಹನುಮಗಿರಿಯತ್ತ ಆಗಮಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನನ್ಯ ಅಚ್ಚತ್ತ ಮೂಡಿತ್ತಾಯ, ಡಾ.ರವೀಶ ಪಡುಮಲೆ, ಶಶಿಕುಮಾರ್ ರೈ ಬಾಲ್ಯೊಟ್ಟು, ಸಾಜಾ ರಾದಕೃಷ್ಣ ಆಳ್ವ, ಮುರಳಿಕೃಷ್ಣ ಹಸಂತಡ್ಕ, ರವಿಕಿರಣ್ ಶೆಟ್ಟಿ ಮತ್ತು ಬುಡಿಯಾರ್ ರಾಧಾಕೃಷ್ಣ ರೈ ಉಪಸ್ಥಿತರಿದ್ದರು.