ಧರ್ಮಸ್ಥಳ: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ, 'ಕಾಂತಾರ' ಖ್ಯಾತಿಯ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಕ್ಷೇತ್ರಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಮಂಜುನಾಥ ಸ್ವಾಮಿಗೆ ವಿಶೇಷ ರಂಗಪೂಜೆ ಸೇವೆಯನ್ನು ನೆರವೇರಿಸಿ, ದೇವರ ಆಶೀರ್ವಾದ ಪಡೆದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹೆಗ್ಗಡೆಯವರು ನಟ ರಿಷಬ್ ಶೆಟ್ಟಿ ಅವರಿಗೆ ಶುಭ ಹಾರೈಸಿದರು.
ಈ ಭೇಟಿಯ ಸಂದರ್ಭದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್, ಆರ್ಯಮನ್ ಹಾಗೂ ಕಿಯಾಂಶ್ ಉಪಸ್ಥಿತರಿದ್ದರು. 'ಕಾಂತಾರ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಅವರು ಆಗಾಗ ಕರಾವಳಿಯ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಈ ಬಾರಿಯ ಅವರ ಧರ್ಮಸ್ಥಳ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.