image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗ್ಯಾಸ್ ಸಿಲಿಂಡರ್​ ಓಟಿಪಿಯಿಂದ ಬದುಕಿ ಬಂದ ವೃದ್ಧ!

ಗ್ಯಾಸ್ ಸಿಲಿಂಡರ್​ ಓಟಿಪಿಯಿಂದ ಬದುಕಿ ಬಂದ ವೃದ್ಧ!

ಉಡುಪಿ : ಗ್ಯಾಸ್ ಸಿಲಿಂಡರ್​ ಓಟಿಪಿಯಿಂದ ವೃದ್ಧ ಜೀವವೊಂದು ದೊಡ್ಡ ಅಪಾಯದಿಂದ ಬದುಕಿಬಂದಿದೆ. ಆಯತಪ್ಪಿ ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಗ್ಯಾಸ್ ಸಿಲಿಂಡರ್ ಓಟಿಪಿಯಿಂದ ರಕ್ಷಣೆ ಮಾಡಲಾಗಿದೆ. ಈ ಅಪರೂಪದ ಘಟನೆಗೆ ಉಡುಪಿ ಜಿಲ್ಲೆ ಸಾಕ್ಷಿ ಆಗಿದೆ. ಸದ್ಯ ರಕ್ಷಣೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ನಗರದ ಕೊಡವೂರು ವಾರ್ಡ್ ಕಂಬ್ಳಕಟ್ಟದಲ್ಲಿ ನಿರ್ಜನ ಪ್ರದೇಶದ ಮನೆಯಲ್ಲಿ ಶೀನಿವಾಸ್​​ ಆಚಾರ್ಯ(62) ಎಂಬುವವರು ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಸುಧಾರಿಸಿಕೊಂಡದ್ದ ಅವರು ತೋಟಕ್ಕೆ ನೀರು ಹಾಯಿಸಲು  ತೆರಳಿದ್ದಾರೆ. ಬಾವಿಗೆ ಹಾಕಿದ್ದ ಪಂಪ್​​ನಲ್ಲಿ ಕಸ ತುಂಬಿದೆ. ಅದನ್ನ ಸ್ವಚ್ಛ ಮಾಡಲು ಬಾವಿ ಕಡೆಗೆ ತೆರಳಿದ್ದಾರೆ. ಪೈಪ್ ಎಳೆಯಲು ಹೋಗಿ ಹಗ್ಗ ತುಂಡಾಗಿದೆ. ಈ ವೇಳೆ ಅವರು ಕೂಡ ಆಯತಪ್ಪಿ ಸುಮಾರು 15 ರಿಂದ 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಏಕಾಂಗಿಯಾಗಿ ಶ್ರೀನಿವಾಸ್​ ಆಚಾರ್ಯ ವಾಸಿಸುತ್ತಿದ್ದ ಹಿನ್ನೆಲೆ ಯಾರ ಗಮನಕ್ಕೂ ಬಂದಿರಲಿಲ್ಲ. ಬಾವಿ ಒಳಗಿಂದ ಎಷ್ಟೇ ಬೊಬ್ಬೆ ಹೊಡೆದರು ಯಾರ ಅರಿವಿಗೂ ಬಂದಿಲ್ಲ. ಇನ್ನೇನು ಮಾಡುವುದು ಎಂದು ಬಾವಿಯಲ್ಲಿದ್ದ ಪೈಪ್​​ವೊಂದನ್ನು ಹಿಡಿದು ಕುಳಿತುಕೊಂಡಿದ್ದಾರೆ. ಶ್ರೀನಿವಾಸ್​​ ಆಚಾರ್ಯ ಅವರು ಹೇಳುವ ಪ್ರಕಾರ ಮೂರು ದಿನಗಳ ಕಾಲ ಬಾವಿಯಲ್ಲಿ ಇದ್ದೆ ಎನ್ನುತ್ತಿದ್ದಾರೆ.

ಶ್ರೀನಿವಾಸ್ ಅವರು ಸಿಂಗಲ್ ಗ್ಯಾಸ್ ಸಿಲಿಂಡರ್ ಹೊಂದಿದ್ದಾರೆ. ಗ್ಯಾಸ್ ಬುಕ್ ಮಾಡಿ ಪರಿಚಯಸ್ಥರಾದ ಗಣೇಶ್ ಎಂಬವರಿಂದ ಖಾಲಿ ಸಿಲಿಂಡರ್ ಪಡೆದಿದ್ದರು. ಆ ಮೂಲಕ ಹೊಸ ಸಿಲಿಂಡರ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಈ ನಡುವೆ ಬಾವಿಗೆ ಬಿದ್ದಿದ್ದಾರೆ. ಹೊಸ ಸಿಲಿಂಡರ್ ಪಡೆಯಲು ಓಟಿಪಿ ಬೇಕಾಗಿತ್ತು. ಗ್ಯಾಸ್ ಸರಬರಾಜಿಗೆ ಬಂದಾಗ ಶ್ರೀನಿವಾಸ್ ಆಚಾರ್ಯ ಮನೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಸಿಲಿಂಡರ್​ ನೀಡಿದ್ದ ಗಣೇಶ್​​ ಅವರಿಗೆ ಮಾಹಿತಿ ನೀಡಿದ್ದಾರೆ. ಗಣೇಶ್ ತಮ್ಮ ಬಾಡಿಗೆ ಮನೆಯಲ್ಲಿ ಇರುವ ವ್ಯಕ್ತಿಗಳ ಮೂಲಕ ಶ್ರೀನಿವಾಸ್​ಗಾಗಿ ಹುಡುಕಾಡಿದ್ದಾರೆ. ಈ ವೇಳೆ ತೋಟದ ಮನೆಯ ಮೂಲೆಯಲ್ಲಿರುವ ಬಾವಿಯಲ್ಲಿ ಶ್ರೀನಿವಾಸ್ ಬಿದ್ದಿರುವುದು ಪತ್ತೆ ಆಗಿದೆ. ತಕ್ಷಣವೇ ಕಾರ್ಯಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಶ್ರೀನಿವಾಸ್ ಆಚಾರ್ಯರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

Category
ಕರಾವಳಿ ತರಂಗಿಣಿ