ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಏಪ್ರಿಲ್ 5, 2026ರಂದು 63ನೇ ರಾಷ್ಟ್ರೀಯ ಸಮುದ್ರ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಿತು. ಇದರೊಂದಿಗೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಮರ್ಚೆಂಟ್ ನೆವಿ ವಾರಕ್ಕೆ ಭವ್ಯ ತೆರೆಬಿದ್ದಿದೆ. ಭಾರತದ ಸಮುದ್ರ ಪರಂಪರೆಯನ್ನು ಸ್ಮರಿಸುವ ಮತ್ತು ಜಾಗತಿಕ ವ್ಯಾಪಾರಕ್ಕೆ ಹಗಲಿರುಳು ಶ್ರಮಿಸುವ ನಾವಿಕರ ಅಮೂಲ್ಯ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದಿನದ ಆರಂಭದಲ್ಲಿ ಪಣಂಬೂರಿನ ಸೀಫೆರರ್ಸ್ ಸ್ಮಾರಕದಲ್ಲಿ ಭಾವಪೂರ್ಣ ಪುಷ್ಪನಮನ ಕಾರ್ಯಕ್ರಮ ನಡೆಯಿತು. ಎನ್.ಎಂ.ಪಿ.ಎ. ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ಸಮುದ್ರ ಸೇವೆಯ ವೇಳೆ ಪ್ರಾಣತ್ಯಾಗ ಮಾಡಿದ ವೀರ ನಾವಿಕರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂದರಿನ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬಂದರು ಬಳಕೆದಾರರು ಉಪಸ್ಥಿತರಿದ್ದು ಮೃತ ನಾವಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಜೆ ಪಣಂಬೂರಿನ ಜೆಎನ್‌ಸಿ ಹಾಲ್‌ನಲ್ಲಿ ನಡೆದ ಮರ್ಚೆಂಟ್ ನೆವಿ ವಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ಎಸ್. ಶಾಂತಿ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ, ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು, ದೇಶದ ಆರ್ಥಿಕ ಪ್ರಗತಿಯಲ್ಲಿ ನಾವಿಕರ ಪಾತ್ರ ಅನನ್ಯವಾದುದು. ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ಅವರ ಶ್ರಮವನ್ನು ಸಮಾಜ ಗುರುತಿಸಿ ಗೌರವಿಸುವುದು ಅತ್ಯಗತ್ಯ ಎಂದು ಆಶಯ ವ್ಯಕ್ತಪಡಿಸಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ 'ಗ್ರೀನ್ ಹೀರೋ ಆಫ್ ಇಂಡಿಯಾ' ಡಾ. ಆರ್. ಕೆ. ನಾಯರ್ ಅವರು, ಸಮುದ್ರ ಕಾರ್ಯಾಚರಣೆಗಳ ವೇಳೆ ಪರಿಸರ ಸಂರಕ್ಷಣೆಗೆ ನೀಡಬೇಕಾದ ಆದ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಮೆರಿಟೈಮ್ ಡೇ ಸೆಲೆಬ್ರೇಶನ್ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಮನೋಜ್ ಜೋಶಿ ಹಾಗೂ ಮಂಗಳೂರು ಮರ್ಚೆಂಟೈಲ್ ಮೆರೈನ್ ಡಿಪಾರ್ಟ್‌ಮೆಂಟ್‌ನ ಸರ್ವೇಯರ್-ಇನ್-ಚಾರ್ಜ್ ಶ್ರೀ ಉಬೈದು ರೆಹಮಾನ್ ಉಪಸ್ಥಿತರಿದ್ದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮತಿ ಎಸ್. ಶಾಂತಿ ಅವರು, ಸಮುದ್ರೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಾತ್ಮಕ ಕಾರ್ಯಪದ್ಧತಿ ಅತ್ಯಗತ್ಯ ಎಂದರು. ಅಲ್ಲದೆ, ಮರ್ಚೆಂಟ್ ನೆವಿ ವಾರದುದ್ದಕ್ಕೂ ಸಹಕರಿಸಿದ ಸಿಬ್ಬಂದಿ ಮತ್ತು ಹಿತಾಸಕ್ತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ಮರ್ಚೆಂಟ್ ನೆವಿ ವಾರದ ವರದಿ ಮಂಡನೆ, ಗಣ್ಯರ ಸನ್ಮಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಸೂರೆಗೊಂಡವು.
ಮಾರ್ಚ್ 28ರಿಂದ ಏಪ್ರಿಲ್ 5ರವರೆಗೆ ನಡೆದ ಈ ವಾರಾಚರಣೆಯಲ್ಲಿ ಮೆರಿಟೈಮ್ ಕ್ರಿಕೆಟ್ ಪಂದ್ಯಾವಳಿ, ಟ್ರೆಷರ್ ಹಂಟ್, ಪಣಂಬೂರು ಕಡಲತೀರ ಸ್ವಚ್ಛತಾ ಅಭಿಯಾನ, ಟಗ್ ಆಫ್ ವಾರ ಮತ್ತು 123 ಮಂದಿ ಪಾಲ್ಗೊಂಡ ರಕ್ತದಾನ ಶಿಬಿರದಂತಹ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, 'ಇಂಡಿಯನ್ ಪೋರ್ಟ್ ಆಕ್ಟ್ 2025' ಕುರಿತ ಸೆಮಿನಾರ್, ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ರೇಡಿಯೋ ಸಂವಾದ ಹಾಗೂ ಮೆರಿಟೈಮ್ ಮ್ಯಾರಥಾನ್‌ಗಳು ಯಶಸ್ವಿಯಾಗಿ ನಡೆದವು. ಈ ಎಲ್ಲಾ ಕಾರ್ಯಕ್ರಮಗಳು ಸಮುದ್ರೋದ್ಯಮದ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾದವು.