image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

‘ಆಳ್ವಾಸ್ ಇಂಟಿಗ್ರೇಟೆಡ್ ಕ್ಲಿನಿಕಲ್ ಡಯಾಗ್ನಾಸ್ಟಿಕ್ಸ್ ಲ್ಯಾಬೋರೇಟರಿ’ ಉದ್ಘಾಟನೆ

‘ಆಳ್ವಾಸ್ ಇಂಟಿಗ್ರೇಟೆಡ್ ಕ್ಲಿನಿಕಲ್ ಡಯಾಗ್ನಾಸ್ಟಿಕ್ಸ್ ಲ್ಯಾಬೋರೇಟರಿ’ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಶನಿವಾರ ‘ಆಳ್ವಾಸ್ ಇಂಟಿಗ್ರೇಟೆಡ್ ಕ್ಲಿನಿಕಲ್ ಡಯಾಗ್ನಾಸ್ಟಿಕ್ಸ್ ಲ್ಯಾಬೋರೇಟರಿ’ಯನ್ನು ಅತ್ಯಂತ ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಕೆ ಅವರು ದೀಪ ಬೆಳಗಿಸುವ ಮೂಲಕ ನೂತನ ಪ್ರಯೋಗಾಲಯಕ್ಕೆ ಚಾಲನೆ ನೀಡಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಜಯಪ್ರಕಾಶ್ ಶೆಟ್ಟಿ ಅವರು, ವೈದ್ಯಕೀಯ ಲೋಕದಲ್ಲಿ ಕೇಂದ್ರ ಪ್ರಯೋಗಾಲಯ ಮತ್ತು ರೇಡಿಯಾಲಜಿ ವಿಭಾಗಗಳು ಬೆನ್ನೆಲುಬಿನಂತಿವೆ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯಂತಹ ಉನ್ನತ ಸಂಸ್ಥೆಗಳು ಯಾವುದೇ ವೈದ್ಯಕೀಯ ಸಂಸ್ಥೆಯ ಗುಣಮಟ್ಟವನ್ನು ಅಳೆಯುವಾಗ ಈ ಎರಡು ವಿಭಾಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ಪ್ರಯೋಗಾಲಯದ ಸ್ಥಾಪನೆಯು ಕೇವಲ ಸೌಲಭ್ಯವಲ್ಲ, ಬದಲಾಗಿ ಆ ಸಂಸ್ಥೆಯ ಶೈಕ್ಷಣಿಕ ಶಿಸ್ತು ಹಾಗೂ ರೋಗಿಗಳಿಗೆ ನೀಡುವ ಸೇವೆಯ ಗುಣಮಟ್ಟದ ಪ್ರತಿಬಿಂಬವಾಗಿದೆ. ಈ ಸೌಲಭ್ಯವು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ದಾರಿದೀಪವಾಗುವುದರ ಜೊತೆಗೆ, ರೋಗಿಗಳಿಗೆ ತ್ವರಿತ ಹಾಗೂ ನಿಖರವಾದ ಚಿಕಿತ್ಸೆ ದೊರೆಯುವಂತೆ ಮಾಡುತ್ತದೆ ಎಂದು ಅವರು ವಿವರಿಸಿದರು.

​ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ವೈದ್ಯಕೀಯ ಅಧೀಕ್ಷಕ ಡಾ. ಪಾಂಗಾಳ ಹರೀಶ್ ನಾಯಕ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನಿಖರ ರೋಗನಿರ್ಣಯವೇ ಯಶಸ್ವಿ ಚಿಕಿತ್ಸೆಯ ಗುಟ್ಟು. ಒಂದೇ ಸೂರಿನಡಿ ವಿವಿಧ ಸುಧಾರಿತ ಪರೀಕ್ಷೆಗಳು ಲಭ್ಯವಿರುವುದರಿಂದ ರೋಗಿಗಳ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ ಎಂದು ತಿಳಿಸಿದರು.

​ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಡಾ. ಹನ ಹಾಗೂ ಡಾ. ಗ್ರೀಷ್ಮಾ ಉಪಸ್ಥಿತರಿದ್ದರು. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಡೀನ್ ಡಾ. ಮಹಾಬಲ ಶೆಟ್ಟಿ ಸ್ವಾಗತಿಸಿ, ನರೇಶ್ ರೈ ಕಾರ್ಯಕ್ರಮ ನಿರ್ವಹಿಸಿದರು. ಡಾ. ಆಶಾರಾಣಿ ಅವರು ವಂದನಾರ್ಪಣೆ ಮಾಡಿದರು.

Category
ಕರಾವಳಿ ತರಂಗಿಣಿ