ಮಂಗಳೂರು: ಸೌತ್ ಕೆನರಾ ಫಿಸಿಯೋಥೆರಫಿ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಏಪ್ರಿಲ್ 10 ಮತ್ತು 11 ರಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಭೌತ ಚಿಕಿತ್ಸೆಯ ಸಮ್ಮೇಳನ 'ಮಂಗಳೂರು ಫಿಸಿಯೋಕಾನ್-2026' ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕಾರ್ ಫರೀದ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಏಪ್ರಿಲ್ 10ರಂದು ಬೆಳಿಗ್ಗೆ 9 ಗಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,
ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಆರೋಗ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಸಮ್ಮೇಳನದ ಅಂಗವಾಗಿ ಏಪ್ರಿಲ್ 6ರಂದು ರಕ್ತದಾನ ಶಿಬಿರ, ಏಪ್ರಿಲ್ 7ರಂದು ಹಣ್ಣು ಹಂಪಲು ವಿತರಣೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಏಪ್ರಿಲ್ 8ರಂದು ನಗರದ ವಿವಿಧೆಡೆ ಪೂರ್ವ ಸಮ್ಮೇಳನ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಫಿಲಿಪ್ಪೀನ್ಸ್, ಮಸ್ಕತ್, ದುಬೈ ಸೇರಿದಂತೆ ವಿವಿಧ ದೇಶಗಳ ಸುಮಾರು ಆರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಈ 26ನೇ ವರ್ಷದ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಡಾ. ವಿಜಯ್ ಪಿ., ಡಾ. ಮುಹಮ್ಮದ್ ಸುಹೈಲ್, ಡಾ. ವೈಶಾಲಿ ಶ್ರೀಜಿತ್ ಮತ್ತು ಡಾ. ಭರತ್ ಉಪಸ್ಥಿತರಿದ್ದರು.