ಮಂಗಳೂರು: ಇಲ್ಲಿನ ಪ್ರಸಿದ್ಧ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (HPCL) ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ಅಲ್ಟ್ರಾಸೌಂಡ್ ಉಪಕರಣವನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ, "ತಾಯಿ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಲೇಡಿಗೋಷನ್ ಆಸ್ಪತ್ರೆ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಆಸ್ಪತ್ರೆಯಲ್ಲಿ ಪ್ರತಿದಿನ 130ಕ್ಕೂ ಹೆಚ್ಚು ಸ್ಕ್ಯಾನಿಂಗ್‌ಗಳು ನಡೆಯುತ್ತಿದ್ದು, ಈ ಹೊಸ ಉಪಕರಣವು ಸಾರ್ವಜನಿಕರಿಗೆ ಇನ್ನಷ್ಟು ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ," ಎಂದು ತಿಳಿಸಿದರು.
ಉಪಕರಣವನ್ನು ಅನಾವರಣಗೊಳಿಸಿದ ಕೆ.ಎಂ.ಸಿ. ಅಸೋಸಿಯೇಟ್ ಡೀನ್ ಡಾ. ಅಶ್ಫಾಕ್ ಆಲಿ ಅವರು ಮಾತನಾಡಿ, ಸರಕಾರಿ ಹಾಗೂ ಕೆ.ಎಂ.ಸಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಶ್ಲಾಘನೀಯ. ಈ ಉಪಕರಣವನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂಬ ಭರವಸೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಚ್.ಪಿ.ಸಿ.ಎಲ್ ಜನರಲ್ ಮ್ಯಾನೇಜರ್ ಶ್ರೀ ಅಜಿತ್ ಅವರು ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದ್ದಲ್ಲದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ಹೆಚ್.ಪಿ.ಸಿ.ಎಲ್‌ನ ಪ್ರಮುಖರಾದ ಶ್ರೀ ದಿನೇಶನ್, ಶ್ರೀ ಅಶೀಶ್ ಅಭಿಮನ್ಯು, ಮೊಹಮ್ಮದ್ ಕಾಸಿಂ, ದ್ಯಾವರಿ ಭರತ್ ಕುಮಾರ್ ಹಾಗೂ ಕೆ.ಎಂ.ಸಿ ವತಿಯಿಂದ ಡಾ. ನಿಖಿಲ್ ಶೆಟ್ಟಿ, ಡಾ. ಸುಪ್ರಸನ್ನ, ಡಾ. ಶ್ವೇತಾ ಪೂಜಾರಿ ಮತ್ತು ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಉಪಸ್ಥಿತರಿದ್ದರು.
ಶ್ರೀಮತಿ ಅಂಬಿಕಾ ಮತ್ತು ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲವೀನಾ ವಂದನಾರ್ಪಣೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.