ಮಂಗಳೂರು:: ಜೆಜು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ 'ಶುಭ ಶುಕ್ರವಾರ'ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್‌ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು.
ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಜೆಜು ಕ್ರಿಸ್ತರ ಕಷ್ಟಾನುಭವದ ವಾಚನ, ಜಗತ್ತಿನ ಕಲ್ಯಾಣಕ್ಕಾಗಿ ಪ್ರಾರ್ಥನೆ, ಪವಿತ್ರ ಶಿಲುಬೆಯ ಆರಾಧನೆ ಹಾಗೂ ಪರಮ ಪ್ರಸಾದ ಸ್ವೀಕಾರದ ವಿಧಿಗಳನ್ನು ಒಳಗೊಂಡಿತ್ತು.
ಈ ಸಂದರ್ಭದಲ್ಲಿ ಜೆಜು ಕ್ರಿಸ್ತರ ಕಷ್ಟಾನುಭವದ ಕುರಿತು ಪ್ರಭಾವಿ ಚಿಂತನೆ ನಡೆಸಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು, "ಶಿಲುಬೆಯು ದೇವರ ಪ್ರೀತಿ ಮತ್ತು ಭರವಸೆಯ ಸಂಕೇತ" ಎಂದು ಬಣ್ಣಿಸಿದರು. "ಮಾನವಕುಲದ ಉದ್ಧಾರಕ್ಕಾಗಿ ದೇವರು ಎಂತಹ ದೊಡ್ಡ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬುದಕ್ಕೆ ಕ್ರಿಸ್ತರ ಬಲಿದಾನವೇ ಸಾಕ್ಷಿ. ಶಿಲುಬೆಯು ಸೋಲಿನ ಸಂಕೇತವಲ್ಲ, ಬದಲಾಗಿ ಅದು ಹೊಸ ಭರವಸೆಯ ದಾರಿದೀಪ. ನಾವು ಜೀವನದ ಕಷ್ಟಗಳಿಗೆ ಧೃತಿಗೆಡದೆ, ಶಿಲುಬೆಯ ಮೇಲಿರುವ ಯೇಸು ಕ್ರಿಸ್ತರನ್ನು ನೋಡಿ ಸವಾಲುಗಳನ್ನು ಎದುರಿಸುವ ಶಕ್ತಿ ಪಡೆಯಬೇಕು" ಎಂದು ಅವರು ಭಕ್ತಾದಿಗಳಿಗೆ ಕರೆ ನೀಡಿದರು.
ಪಂಜ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾದರ್ ಮೆಲ್ವಿನ್ ಜಾನ್ ಡಿಸೋಜಾ ಅವರು ಪವಿತ್ರ ವಿಧಿಗಳಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಪಂಜ ಫಿರ್ಗಜಿನ ನೂರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿ ಸಲ್ಲಿಸಿದರು.