ಮಂಗಳೂರು: ಸೋದೆ ಶ್ರೀ ವಾದಿರಾಜ ಮಠದ ಪ್ರಮುಖ ಶಿಷ್ಯ ಸಮುದಾಯವಾದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ವತಿಯಿಂದ ಏಪ್ರಿಲ್ 7ರಂದು ಮಂಗಳೂರಿನಲ್ಲಿ 'ಗುರುವಂದನಾ' ಮಹೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ ಎಂದು ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೇಟ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಸಂಜೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾ ಭವನದಲ್ಲಿ ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಭಕ್ತಿಪೂರ್ವಕ ಗುರುವಂದನೆ ಸಲ್ಲಿಸಲಾಗುವುದು.
ಕಾರ್ಯಕ್ರಮದ ಅಂಗವಾಗಿ ಅಂದು ಅಪರಾಹ್ನ 3 ಗಂಟೆಗೆ ಡೋಂಗರಕೇರಿ ಕೆನರಾ ಹೈಸ್ಕೂಲ್ ಬಳಿಯಿಂದ ಶ್ರೀ ಶರವು ಮಹಾಗಣಪತಿ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಈ ಮೆರವಣಿಗೆಯು ಡೋಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನ, ನ್ಯೂಚಿತ್ರಾ ಟಾಕೀಸ್ ಹಾಗೂ ಕಾರ್‌ಸ್ಟ್ರೀಟ್ ರಸ್ತೆಯ ಮಾರ್ಗವಾಗಿ ಸಾಗಲಿದೆ. ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಪೂಜ್ಯ ಶ್ರೀಪಾದರಿಗೆ ಪಾದಪೂಜೆ ಸಮರ್ಪಣೆ ಮತ್ತು ಆಶೀರ್ವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ದೈವಜ್ಞ ಬ್ರಾಹ್ಮಣ ಸಮುದಾಯವು ಶ್ರೀ ವಾದಿರಾಜ ಗುರುಸಾರ್ವಭೌಮರ ಅನುಗ್ರಹಕ್ಕೆ ಪಾತ್ರವಾದ ಸಾತ್ವಿಕ ಪರಂಪರೆಯ ಹಿನ್ನೆಲೆ ಹೊಂದಿದ್ದು, ಅಂದು ಪರಮಪೂಜ್ಯರಿಗೆ ಕನಕಾಭಿಷೇಕ ಮತ್ತು ಪುಷ್ಪಾಭಿಷೇಕದ ಮೂಲಕ ವಿಶೇಷ ಗೌರವ ಅರ್ಪಿಸಲಾಗುವುದು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಶಿಷ್ಯ ಭಕ್ತರು ಹಾಗೂ ಸಾವಿರಾರು ನಾಗರಿಕರು ಪಾಲ್ಗೊಳ್ಳಲಿದ್ದು, ರಾತ್ರಿ 8:30ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ ವಿನೋದ್ ಕುಮಾರ್ ಶೇಟ್, ಅನಿಲ್ ಸದಾನಂದ ಶೇಟ್, ಗಣೇಶ್ ಕೆ ಕೆ ಆರ್ ಶೇಟ್, ಪ್ರಶಾಂತ್ ಶೇಟ್, ಸುದಾಕರ್ ರಾವ್ ಪೇಜಾವರ್ ಮತ್ತು ಎಂ ನಿಶಾಂತ್ ಶೇಟ್ ಉಪಸ್ಥಿತರಿದ್ದರು.