image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅತ್ತಾವರದ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

ಅತ್ತಾವರದ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

ಮಂಗಳೂರು:  ಅತ್ತಾವರದಲ್ಲಿರುವ ಐತಿಹಾಸಿಕ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 19 ರಿಂದ 23ರ ವರೆಗೆ ಬಹಳ ವೈಭವದಿಂದ ಬ್ರಹ್ಮಕಲಶ ಸಂಭ್ರಮ ನಡೆಯಲಿದೆ. ಹಲವಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಈ ಬಾರಿ ನೂತನವಾಗಿ ನಿರ್ಮಿಸಲಾದ ಗರ್ಭಗೃಹದ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕದ ನಿಮಿತ್ತ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು  ಶ್ರೀ ಅಯ್ಯಪ್ಪ  ಸಮಿತಿಯ ಅಧ್ಯಕ್ಷರಾದ  ಸೂರಜ್ ರಾಘವನ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,

ಏಪ್ರಿಲ್ 19 ರಂದು ಮಂಗಳಾದೇವಿ ದೇವಸ್ಥಾನದಿಂದ ಅತ್ತಾವರ ಕ್ಷೇತ್ರದವರೆಗೆ ಆಕರ್ಷಕ ಹೊರಕಾಣಿಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಏಪ್ರಿಲ್ 23 ರಂದು ಅತ್ತಾವರ ಕ್ಷೇತ್ರದಲ್ಲಿ ನೂತನ ಗರ್ಭಗೃಹದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶಾಭಿಷೇಕವು ಬೆಳಿಗ್ಗೆ 7:30ಕ್ಕೆ ನೆರವೇರಲಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಪಂದಳ ರಾಜವಂಶಸ್ಥರಾದ ಶ್ರೀ ನಾರಾಯಣ ವರ್ಮ ತಂಬುರಾನ್ ಅವರು ವಿಶೇಷವಾಗಿ ಉಪಸ್ಥಿತರಿರಲಿದ್ದಾರೆ.

ಪ್ರತಿದಿನ ಸಂಜೆ ನಡೆಯುವ ಧಾರ್ಮಿಕ ಸಭೆಗಳಲ್ಲಿ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜೀ ಸ್ವಾಮೀಜಿ, ಓಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸಾರ್ವಜನಿಕರ ಮನರಂಜನೆಗಾಗಿ ಪ್ರತಿದಿನ ಸಂಜೆ 6:15ರಿಂದ ವಿವಿಧ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, 'ಮಲೆತ ಬೊಲ್ಪು' ಎಂಬ ಯಕ್ಷಗಾನ ಬಯಲಾಟ, ದೇವದಾಸ್ ಕಾಪಿಕಾಡ್ ತಂಡದಿಂದ 'ಎನ್ನನೇ ಕಥೆ' ಎಂಬ ತುಳು ಹಾಸ್ಯ ನಾಟಕ, ಖ್ಯಾತ ಗಾಯಕ ರಮೇಶ್ಚಂದ್ರ ಅವರಿಂದ ಸಂಗೀತ ರಸಮಂಜರಿ ಹಾಗೂ ವಿವಿಧ ತಂಡಗಳಿಂದ ನೃತ್ಯ ವೈಭವ ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತಿದಿನ ಭಜನಾ ಸಂಕೀರ್ತನೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುರಳೀದರ್, ಗೋಕುಲ್ ದಾಸ್, ರಾಜರತ್ನ ಸನಿಲ್, ಜನಾರ್ದನ್ ಅತ್ತಾವರ್, ಡಾ. ಮಾಲತಿ ಶೆಟ್ಟಿ ಮಾಣೂರು, ಕ್ಷಿತಿ ಮಮ್ಲೂರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ