ಮಂಗಳೂರು: ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ರೈತರ ಮಕ್ಕಳಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ 10 ತಿಂಗಳ ವೃತ್ತಿಪರ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಅವಕಾಶವಿದ್ದು, ಸರ್ಕಾರದ ಮೀಸಲಾತಿ ನಿಯಮಾವಳಿಗಳ ಅನ್ವಯ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಅಭ್ಯರ್ಥಿಯ ತಂದೆ/ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರಬೇಕು. ಅರ್ಜಿಯೊಂದಿಗೆ ಜಮೀನಿನ ಪಹಣಿ (RTC) ಸಲ್ಲಿಸುವುದು ಕಡ್ಡಾಯವಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 33 ವರ್ಷ ಹಾಗೂ ಮಾಜಿ ಸೈನಿಕರಿಗೆ 33 ರಿಂದ 65 ವರ್ಷದವರೆಗೆ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವು ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 30 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 15 ಆಗಿದ್ದು, ಇದನ್ನು 'ತೋಟಗಾರಿಕೆ ಜಂಟಿ ನಿರ್ದೇಶಕರು (ಜಿ.ಪಂ.), ಮಂಗಳೂರು' ಇವರ ಹೆಸರಿನಲ್ಲಿ ಐಪಿಒ ಅಥವಾ ಡಿಡಿ ಮೂಲಕ ಪಾವತಿಸಬೇಕಿದೆ.
ಆಸಕ್ತರು ಇಲಾಖಾ ವೆಬ್‌ಸೈಟ್ ಅಥವಾ ಮಂಗಳೂರಿನ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 15ರ ಒಳಗಾಗಿ ಸಲ್ಲಿಸಬೇಕು. ಏಪ್ರಿಲ್ 23ರಂದು ಮಂಗಳೂರಿನ ಕಚೇರಿಯಲ್ಲಿ ಸಂದರ್ಶನ ನಡೆಯಲಿದ್ದು, ಏಪ್ರಿಲ್ 27ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.