image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನವವಿವಾಹಿತ ಸುದೀಪ್ ರೈ ಸಾವು ಪ್ರಕರಣಕ್ಕೆ ಹೊಸ ತಿರುವು!

ನವವಿವಾಹಿತ ಸುದೀಪ್ ರೈ ಸಾವು ಪ್ರಕರಣಕ್ಕೆ ಹೊಸ ತಿರುವು!

ಮಂಗಳೂರು : ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಪ್ರೀತಿಸಿ, ಕೇವಲ ಒಂದು ತಿಂಗಳ ಹಿಂದೆಯಷ್ಟೇ ರಿಜಿಸ್ಟ್ರಾರ್ ಮದುವೆಯಾಗಿದ್ದ ಬೆಳ್ತಂಗಡಿಯ ಸುದೀಪ್ ರೈ ಅವರ ನಿಗೂಢ ಸಾವು ಇದೀಗ ಹನಿಟ್ರ್ಯಾಪ್ ಮತ್ತು ಕಿರುಕುಳದ ಆರೋಪಕ್ಕೆ ಗುರಿಯಾಗಿದೆ. ಫೆಬ್ರವರಿ 17ರಂದು ಸೌಮ್ಯಾ ಎಂಬುವವರನ್ನು ಮದುವೆಯಾಗಿದ್ದ ಸುದೀಪ್, ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸುಮಾರು 12 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅವರು, ಮಾರ್ಚ್ 29ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

​ಈ ಸಾವಿನ ಬೆನ್ನಲ್ಲೇ ಸುದೀಪ್ ಪೋಷಕರು ಸೊಸೆ ಸೌಮ್ಯಾ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ತಂದೆ ದಾಮೋದರ ಶೆಟ್ಟಿ ತಮ್ಮ ಮಗನ ಸಾವಿಗೆ ಆಕೆಯೇ ನೇರ ಕಾರಣ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೌಮ್ಯಾಳಿಗೆ ಈ ಮೊದಲೇ ಎರಡು ಮದುವೆಗಳಾಗಿದ್ದು, ಆಕೆ ಹಲವರೊಂದಿಗೆ ಅಫೇರ್ ಹೊಂದಿದ್ದಳು ಎಂಬ ಕಹಿಸತ್ಯ ಮಗನಿಗೆ ಮದುವೆಯ ನಂತರ ತಿಳಿದಿತ್ತು ಎಂದು ಪೋಷಕರು ದೂರಿದ್ದಾರೆ. ಅಲ್ಲದೆ,  ಆತನಿಗೆ ವಿಷಪ್ರಾಷಣ ಮಾಡಿರುವ ಸಂಶಯವಿದೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

​ಇನ್ನೊಂದೆಡೆ, ಈ ಎಲ್ಲಾ ಆರೋಪಗಳನ್ನು ಪತ್ನಿ ಸೌಮ್ಯಾ ಶೆಟ್ಟಿ ನಿರಾಕರಿಸಿದ್ದಾರೆ. "ನಾನು ಯಾವುದೇ ತಪ್ಪು ಮಾಡಿಲ್ಲ, ಸುದೀಪ್ ಪೋಷಕರು ನನಗೆ ಕಿರುಕುಳ ನೀಡುವ ಉದ್ದೇಶದಿಂದ ಈ ರೀತಿ ದೂರು ನೀಡಿದ್ದಾರೆ" ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಸುದೀಪ್ ಅವರ ಮೊಬೈಲ್ ಕರೆಗಳ ವಿವರದ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ನಡೆದ ಈ ವಿವಾಹದ ಹಿಂದೆ ಅಡಗಿರುವ ಅಸಲಿ ಸತ್ಯವೇನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

Category
ಕರಾವಳಿ ತರಂಗಿಣಿ