ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾಗಳ ಮುಕ್ತ ಸಂಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ವಿಧಿಸಿದ್ದ ಕಠಿಣ ನಿಯಮಗಳಿಗೆ ಹೈಕೋರ್ಟ್ ತಡೆ ನೀಡುವ ಮೂಲಕ ಇ-ರಿಕ್ಷಾ ಚಾಲಕರಿಗೆ ಮತ್ತು ಮಾಲೀಕರಿಗೆ ಭರವಸೆಯ ಕಿರಣ ಮೂಡಿದೆ ಲಾರೆನ್ಸ್ ಡಿಸೋಜಾ ಹೇಳಿದರು. ಈ ಕುರಿತು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೋವಿಡ್ ಸಂದರ್ಭದಲ್ಲಿ ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕ ಎಂಬ ಕಾರಣಕ್ಕೆ ಅನೇಕ ಯುವಕರು ಸಾಲ ಮಾಡಿ ಎಲೆಕ್ಟ್ರಿಕ್ ರಿಕ್ಷಾಗಳನ್ನು ಖರೀದಿಸಿದ್ದರು. ಆಗಿನ ಜಿಲ್ಲಾಧಿಕಾರಿಗಳು ಜುಲೈ 26, 2024 ರಂದು ಜಿಲ್ಲೆಯಾದ್ಯಂತ ಇ-ರಿಕ್ಷಾಗಳು ಮುಕ್ತವಾಗಿ ಸಂಚಾರ ನಡೆಸಲು ಅನುಮತಿ ನೀಡಿದ್ದರು. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ರಿಕ್ಷಾ ಮಾಲೀಕರ ಸಂಘದ ಆಕ್ಷೇಪದ ನಂತರ, ಅಕ್ಟೋಬರ್ 30, 2025 ರಂದು ಹೊಸ ಆದೇಶ ಹೊರಡಿಸಲಾಯಿತು. ಇದರಲ್ಲಿ ಇ-ರಿಕ್ಷಾ ಚಾಲಕರಿಗೆ ಐದು ಕಠಿಣ ಷರತ್ತುಗಳನ್ನು ವಿಧಿಸಲಾಗಿತ್ತು.
ಜಿಲ್ಲಾಡಳಿತದ ಈ ನಿರ್ಧಾರವನ್ನು ಪ್ರಶ್ನಿಸಿ ಇ-ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘವು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಐದು ಷರತ್ತುಗಳಲ್ಲಿ ಪ್ರಮುಖವಾದ ಎರಡು ಷರತ್ತುಗಳಿಗೆ ತಡೆ ನೀಡಿದೆ. ಮೊದಲನೆಯದಾಗಿ, ಚಾಲಕರು ಕನಿಷ್ಠ 5 ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಾಗಿರಬೇಕು ಎಂಬ ನಿಯಮಕ್ಕೆ ತಡೆ ನೀಡಲಾಗಿದೆ. ಎರಡನೆಯದಾಗಿ, ಆರ್‌ಸಿ ಓನರ್ ಮಾತ್ರ ರಿಕ್ಷಾ ಓಡಿಸಬೇಕು ಎಂಬ ಕಡ್ಡಾಯ ನಿಯಮಕ್ಕೂ ಕೋರ್ಟ್ ತಡೆ ನೀಡಿದೆ.
ಈ ತಡೆಯಾಜ್ಞೆಯಿಂದಾಗಿ ಹೊರವಲಯದ ಮತ್ತು ಗ್ರಾಮೀಣ ಭಾಗದ ಚಾಲಕರಿಗೂ ನಗರದಲ್ಲಿ ಸಂಚರಿಸಲು ದಾರಿ ಸುಗಮವಾಗಿದೆ. ಸಾಲ ಮಾಡಿ ರಿಕ್ಷಾ ಖರೀದಿಸಿದ ನೂರಾರು ಕುಟುಂಬಗಳಿಗೆ ಇದು ನೆಮ್ಮದಿ ತಂದಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮನೋರಾಜ್, ಶರಣ್ ಮತ್ತಾಯಸ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.