image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರೋಪಾಡಿ ಗ್ರಾಮದ ಪ್ರಕೃತಿ ಸೌಂದರ್ಯದ ನಡುವೆ ವಿರಾಜಮಾನವಾಗಿರುವ ಈಶ್ವರನ ಹೂದೋಟ ಎಂದು ಖ್ಯಾತವಾಗಿರುವ ಪವಿತ್ರ ಕ್ಷೇತ್ರ ಪದ್ಯಾಣದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಲಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಶ್ಯಾಮ್ ತಿಳಿಸಿದರು.

ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸುಮಾರು 600 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ದೇವಾಲಯವು ಕಾಲಕ್ರಮೇಣ ಶಿಥಿಲಗೊಂಡಿತ್ತು. 1975ರಲ್ಲಿ ಅಂದಿನ ಆಡಳಿತ ಮೊಕ್ತೇಸರರಾದ ದಿವಂಗತ ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಕಾರದೊಂದಿಗೆ ಪುನರ್ ನಿರ್ಮಾಣಗೊಂಡು ಮೊದಲ ಬ್ರಹ್ಮಕಲಶಾಭಿಷೇಕ ಕಂಡಿತ್ತು. ತದನಂತರ 1994 ಮತ್ತು 2009ರಲ್ಲಿ ವಿವಿಧ ನವೀಕರಣ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವಗಳು ನಡೆದಿದ್ದು, ಇದೀಗ 2026ರಲ್ಲಿ ಮತ್ತೊಮ್ಮೆ ಈ ಭವ್ಯ ಪುಣ್ಯಕಾರ್ಯಕ್ಕೆ ಕ್ಷೇತ್ರ ಸಜ್ಜಾಗಿದೆ ಎಂದರು.
​ಬ್ರಹ್ಮಕಲಶೋತ್ಸವದ ಅಂಗವಾಗಿ ಭಾರತದ ಪುಣ್ಯ ನದಿಗಳಾದ ಗಂಗೆ, ಯಮುನೆ, ಸರಸ್ವತಿ, ಕಾವೇರಿ ಸೇರಿದಂತೆ ವಿವಿಧ ನದಿಗಳ ಪವಿತ್ರ ತೀರ್ಥಗಳೊಂದಿಗೆ ಬ್ರಹ್ಮಕಲಶಾಭಿಷೇಕ ಜರುಗಲಿದೆ. ಮಾರ್ಚ್ 30ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ತೀರ್ಥದ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ಪುತ್ತೂರು ಹಾಗೂ ವಿಟ್ಲದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿ, ಸಾಧು-ಸಂತರ ನೇತೃತ್ವದಲ್ಲಿ ಹೊರೆಕಾಣಿಕೆಯೊಂದಿಗೆ ಪದ್ಯಾಣ ಕ್ಷೇತ್ರವನ್ನು ತಲುಪಲಿದೆ.
​ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಉಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಣಿಲ ಶ್ರೀ ಮೋಹನದಾಸ ಸ್ವಾಮೀಜಿ ಸೇರಿದಂತೆ ನಾಡಿನ ಪ್ರಮುಖ ಮಠಾಧೀಶರು ಆಶೀರ್ವಚನ ನೀಡಲಿದ್ದಾರೆ. ಅಲ್ಲದೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನಿತರ ರಾಜಕೀಯ ಮತ್ತು ಸಾಮಾಜಿಕ ಧುರೀಣರು ಪಾಲ್ಗೊಳ್ಳಲಿದ್ದಾರೆ.
​ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್, ಅಧ್ಯಕ್ಷರಾದ ಡಾ. ಅರುಣ್ ಶ್ಯಾಮ್, ಕಾರ್ಯಾಧ್ಯಕ್ಷರಾದ ಶ್ಯಾಮಸುದರ್ಶನ ಹೊಸಮೂಲೆ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಈ ಮಹೋತ್ಸವದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ. ಏಪ್ರಿಲ್ 7ರಂದು ಕಾರ್ಯಕರ್ತರ ಸಭೆ ನಡೆಯಲಿದ್ದು, ಮೇ 20ರಂದು ದೃಢಕಲಶ ಕಾರ್ಯಕ್ರಮದೊಂದಿಗೆ ಈ ಬಾರಿಯ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.

Category
ಕರಾವಳಿ ತರಂಗಿಣಿ