image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಸಂಪ್ರದಾಯ ದಿನ 2026: ವಿದ್ಯಾಗಿರಿಯಲ್ಲಿ ಮೇಳೈಸಿದ ಭಾರತೀಯ ಸಂಸ್ಕೃತಿಯ ಭವ್ಯ ಸೊಬಗು

ಆಳ್ವಾಸ್ ಸಂಪ್ರದಾಯ ದಿನ 2026: ವಿದ್ಯಾಗಿರಿಯಲ್ಲಿ ಮೇಳೈಸಿದ ಭಾರತೀಯ ಸಂಸ್ಕೃತಿಯ ಭವ್ಯ ಸೊಬಗು

ಮೂಡುಬಿದಿರೆ : ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣವು ಶನಿವಾರ ಅಕ್ಷರಶಃ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿ ಕಂಗೊಳಿಸಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿದ್ದ ‘ಆಳ್ವಾಸ್ ಸಂಪ್ರದಾಯ ದಿನ-2026’ ಕಾರ್ಯಕ್ರಮವು ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಜರುಗಿತು.

​ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಶಿವರಾಜ್ ಕುಮಾರ್ ಅವರು, ಆಳ್ವಾಸ್ ಸಂಸ್ಥೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಂಡು ಮಂತ್ರಮುಗ್ಧರಾದರು. ವಿದ್ಯಾರ್ಥಿಗಳ ಹರ್ಷೋದ್ಗಾರದ ನಡುವೆ ತಮ್ಮ ಜನಪ್ರಿಯ ಗೀತೆಗಳಾದ 'ಟುವ್ವಿ ಟುವ್ವಿ', 'ಮುತ್ತಣ ಪೀಪಿ ಊದುವ', 'ಜೋಗಿ' ಚಿತ್ರದ ಹಾಡುಗಳು ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ 'ಬೊಂಬೆ ಹೇಳುತೈತೆ' ಹಾಡುಗಳನ್ನು ಹಾಡಿ, ವೇದಿಕೆಯ ಮೇಲೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಯಾವುದೇ ಸಾಧನೆಗೆ ಮನಸ್ಸಿನಲ್ಲಿ ಧಾರಾಳತನವಿರಬೇಕು, ಅಂತಹ ಗುಣವನ್ನು ನಾನು ಆಳ್ವರಲ್ಲಿ ಕಂಡಿದ್ದೇನೆ. ಇಡೀ ಭಾರತದ ವಿಭಿನ್ನ ಸಂಸ್ಕೃತಿಗಳು ಇಲ್ಲಿ ಒಂದಾಗಿರುವುದನ್ನು ನೋಡಿ ಸಂತೋಷವಾಯಿತು. ಎಲ್ಲರೂ ಹೀಗೆಯೇ ಒಗ್ಗಟ್ಟಿನಿಂದ ಬಾಳಬೇಕು," ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ, "ಭಾರತದ ಎಲ್ಲಾ ಸಂಸ್ಕೃತಿಗಳನ್ನು ಒಂದೇ ಸೂರಿನಡಿ ನೋಡುವುದು ಪುಣ್ಯದ ಕೆಲಸ," ಎಂದು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

​ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಾರಾಷ್ಟ್ರ, ಗುಜರಾತ್, ಕೇರಳ, ಈಶಾನ್ಯ ಭಾರತ ಹಾಗೂ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ತಂಡಗಳಿಂದ ವೈವಿಧ್ಯಮಯ ಕಲಾ ಪ್ರದರ್ಶನಗಳು ನಡೆದವು. ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿದ ಸಾವಿರಾರು ವಿದ್ಯಾರ್ಥಿಗಳು ಕ್ಯಾಂಪಸ್‌ನ ಮೆರುಗನ್ನು ಹೆಚ್ಚಿಸಿದರು. ಇದೇ ವೇಳೆ ವಿದ್ಯಾರ್ಥಿ ಕೌಶಿಕ್ ಎಂಬಾತ ಬಿಡಿಸಿದ ಚಿತ್ರವನ್ನು ಶಿವಣ್ಣ ದಂಪತಿಗೆ ಸ್ಮರಣಿಕೆಯಾಗಿ ನೀಡಲಾಯಿತು.

​ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ ಆಹಾರೋತ್ಸವವು ಜನರ ಗಮನ ಸೆಳೆಯಿತು. ಕೇರಳದ ಕಪ್ಪಾ-ಮೀನು ಸಾರು, ತುಳುನಾಡಿನ ಕೋರಿ ರೊಟ್ಟಿ, ಪುಳಿಮುಂಚಿ, ಮಣಿಪುರದ ಸಿಂಗ್ಜು, ಹೈದರಾಬಾದ್ ಬಿರಿಯಾನಿ ಹಾಗೂ ಗುಜರಾತ್-ಮಹಾರಾಷ್ಟ್ರದ ಚಾಟ್ಸ್ ಸೇರಿದಂತೆ ದೇಶದ ವಿವಿಧ ಪ್ರಾಂತ್ಯಗಳ ರುಚಿಕರ ಖಾದ್ಯಗಳು ಪ್ರೇಕ್ಷಕರ ಜಿಹ್ವಾ ಚಾಪಲ್ಯ ತಣಿಸಿದವು.

​ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್, ವಿವೇಕ್ ಆಳ್ವ ಹಾಗೂ ಚಿತ್ರರಂಗದ ಗಣ್ಯರಾದ ರಾಹುಲ್ ಅಮೀನ್, ಶೈಲಶ್ರೀ ಮೂಲ್ಕಿ, ದಿಶಾ ಶೆಟ್ಟಿ, ಸಾಹಿಲ್ ರೈ ಉಪಸ್ಥಿತರಿದ್ದರು. ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ