ಮಂಗಳೂರು : ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಮತ್ತು ಮಾನವೀಯ ಕಾಳಜಿಗೆ ಹೆಸರಾದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ (FMMCH) ಪ್ಲಾಸ್ಟಿಕ್ ಸರ್ಜರಿ ವಿಭಾಗವು, ಜನ್ಮಜಾತವಾಗಿ ಕಿವಿ ದೋಷದಿಂದ (ಮೈಕ್ರೋಟಿಯಾ) ಬಳಲುತ್ತಿದ್ದ 13 ವರ್ಷದ ಬಾಲಕನಿಗೆ ಸಂಕೀರ್ಣ ಕಿವಿ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಹುಟ್ಟಿನಿಂದಲೇ ಒಂದು ಕಿವಿಯ ಬೆಳವಣಿಗೆ ಸರಿಯಾಗಿ ಇಲ್ಲದ ಕಾರಣ ಈ ಬಾಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೀಳರಿಮೆಯನ್ನು ಅನುಭವಿಸುತ್ತಿದ್ದನು. ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಕುಟುಂಬವು ಫಾದರ್ ಮುಲ್ಲರ್ ಆಸ್ಪತ್ರೆಯನ್ನು ಸಂಪರ್ಕಿಸಿತು. ವೈದ್ಯಕೀಯ ಲೋಕದ ಅತ್ಯುನ್ನತ ವಿಧಾನವಾದ 'ಪಕ್ಕೆಲುಬಿನ ಮೃದುತ್ವದ ಅಂಗಾಂಶ' (Rib Cartilage) ಬಳಸಿ ಕಿವಿಯನ್ನು ಮರುರೂಪಿಸುವ ಸವಾಲಿನ ಕಾರ್ಯಕ್ಕೆ ಪ್ಲಾಸ್ಟಿಕ್ ಸರ್ಜರಿ ತಂಡ ಮುಂದಾಯಿತು.
ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ಪೂರೈಸಲಾಯಿತು. ಮೊದಲ ಹಂತದಲ್ಲಿ, ಬಾಲಕನ ಪಕ್ಕೆಲುಬಿನಿಂದ ಮೃದುವಾದ ಮೂಳೆ ಅಥವಾ ಮೃದ್ವಸ್ಥಿಯನ್ನು ತೆಗೆದು ಅದನ್ನು ನೈಸರ್ಗಿಕ ಕಿವಿಯ ಆಕಾರಕ್ಕೆ ಕತ್ತರಿಸಿ ರೂಪಿಸಲಾಯಿತು. ಎರಡನೇ ಹಂತದಲ್ಲಿ, ರೂಪಿಸಲಾದ ಕಿವಿಯ ಚೌಕಟ್ಟನ್ನು ಸರಿಯಾದ ಸ್ಥಾನದಲ್ಲಿರಿಸಿ, ಚರ್ಮದ ಕಸಿ ಮಾಡುವ ಮೂಲಕ ಕಿವಿಗೆ ನೈಜ ರೂಪ ಮತ್ತು ಗಾತ್ರವನ್ನು ನೀಡಲಾಯಿತು. ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಅರವಿಂದ ರಾವ್ ಅವರ ನೇತೃತ್ವದಲ್ಲಿ, ಕನ್ಸಲ್ಟೆಂಟ್‌ಗಳಾದ ಡಾ. ಕಾರ್ತಿಕ್ ಐತಾಳ್ ಮತ್ತು ಡಾ. ಸಾಯಿ ಅನಂತಲಕ್ಷ್ಮಿ ಅವರ ಸಹಯೋಗದೊಂದಿಗೆ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು. ಅರಿವಳಿಕೆ ವಿಭಾಗದ ಡಾ. ರಾಧೇಶ್ ಹೆಗ್ಡೆ ಮತ್ತು ಡಾ. ಅಭಿರಾಮ್ ಶಾಸ್ತ್ರಿ ಹಾಗೂ ಒಟಿ ಇನ್-ಚಾರ್ಜ್ ರೇಷ್ಮಾ ಮತ್ತು ನರ್ಸಿಂಗ್ ತಂಡದ ಸಮನ್ವಯ ಈ ಯಶಸ್ಸಿಗೆ ಕಾರಣವಾಯಿತು. ಈ ಯಶಸ್ವಿ ಚಿಕಿತ್ಸೆಯಿಂದಾಗಿ ಬಾಲಕನು ಇದೀಗ ಹೊಸ ಆತ್ಮವಿಶ್ವಾಸದೊಂದಿಗೆ ಸಮಾಜದಲ್ಲಿ ಮುನ್ನಡೆಯಲು ಸಜ್ಜಾಗಿದ್ದಾನೆ. ತನ್ನ ಮಗನಿಗೆ ಮರುಜೀವ ನೀಡಿದ ವೈದ್ಯರಿಗೆ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಗೆ ಬಾಲಕನ ತಂದೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.