image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಪ್ರಿಲ್ 4 ಮತ್ತು 5ರಂದು ಅದ್ದೂರಿ ಗುರುಪುರ ಕಂಬಳ

ಏಪ್ರಿಲ್ 4 ಮತ್ತು 5ರಂದು ಅದ್ದೂರಿ ಗುರುಪುರ ಕಂಬಳ

ಮಂಗಳೂರು: ತುಳುನಾಡಿನ ಮಣ್ಣಿನ ಸೊಗಡು ಮತ್ತು ಸಾಹಸದ ಸಂಕೇತವಾದ ಕಂಬಳವು ಈ ಬಾರಿ ಗುರುಪುರದಲ್ಲಿ ಅದ್ದೂರಿಯಾಗಿ ಜರುಗಲಿದ್ದು, ಇದು ಕೇವಲ ಕ್ರೀಡೆಯಾಗಿ ಉಳಿಯದೆ ಸಾಂಸ್ಕೃತಿಕ ಹಬ್ಬವಾಗಿ ಹೊರಹೊಮ್ಮಲಿದೆ ಎಂದು ಮೂಳೂರು- ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಹೇಳಿದರು. ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 

ಕಳೆದ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂಬರುವ ದಸರಾ ಮಹೋತ್ಸವದಲ್ಲಿ ಕಂಬಳವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸುವ ಭರವಸೆ ನೀಡಿದ್ದರು. ತಾಂತ್ರಿಕ ಕಾರಣಗಳಿಂದ ಕಳೆದ ಬಾರಿ ಇದು ಸಾಧ್ಯವಾಗದಿದ್ದರೂ, ಈ ವರ್ಷದ ದಸರಾ ಸಂಭ್ರಮದಲ್ಲಿ ಕಂಬಳದ ವೇಗವನ್ನು ಕಾಣಬಹುದಾಗಿದೆ ಎಂದರು. 

ಗುರುಪುರ ಕಂಬಳದಲ್ಲಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಕಂಬಳದ ಜೊತೆಗೆ ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಸನ್ಮಾನ ಮತ್ತು ತುಳುನಾಡಿನ ಹಳೆಯ ಶೈಲಿಯ ಖಾದ್ಯಗಳ ಮೇಳ ಜನರನ್ನು ಸೆಳೆಯಲಿದೆ. ದೂರದ ಕಾರ್ಕಳ, ಬೈಂದೂರು ಮತ್ತು ಸುಳ್ಯ ಭಾಗಗಳಿಂದ ಬರುವ ಕಂಬಳದ ಮಾಲೀಕರಿಗೆ ವಿಶೇಷ ಗೌರವವಾಗಿ ಬೆಳ್ಳಿ ನಾಣ್ಯ ಮತ್ತು ಕೋಣಗಳಿಗಾಗಿ 30 ಕೆ.ಜಿ.ಯ ಹುರುಳಿ ಚೀಲವನ್ನು ಉಡುಗೊರೆಯಾಗಿ ನೀಡಲಾಗುವುದು. ಅಲ್ಲದೆ, ಆಗಮಿಸುವ ಎಲ್ಲಾ ಪ್ರೇಕ್ಷಕರಿಗೆ ಮತ್ತು ಮಾಲೀಕರಿಗೆ ಎರಡು ದಿನಗಳ ಕಾಲ ಮಂಗಳೂರು ಶೈಲಿಯ ಸಾಂಪ್ರದಾಯಿಕ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಜಾತಿ, ಮತ ಮತ್ತು ಪಂಥಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಈ ಸಾಂಸ್ಕೃತಿಕ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಪ್ರೋತ್ಸಾಹ ನೀಡಬೇಕೆಂದು ಕಂಬಳ ಸಮಿತಿ ವಿನಂತಿಸಿದರು.

ಗುಣಪಾಲರ ಕಡಂಬರ ಮಾತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪದ್ಮನಾಭ ಕೋಟ್ಯಾನ್ , ಸ್ಥಾಪಕಾಧ್ಯಕ್ಷರಾದ ಶ್ರೀ ರಾಜ್ ಕುಮಾರ್ ಶೆಟ್ಟಿ , ಕಾರ್ಯಾಧ್ಯಕ್ಷರಾದ ಶ್ರೀ ಜಗದೀಶ ಶೆಟ್ಟಿ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯಶವಂತ್ ಕುಮಾರ್ ಶೆಟ್ಟಿ  ಉಪಸ್ಥಿತರಿದ್ದರು

Category
ಕರಾವಳಿ ತರಂಗಿಣಿ