image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ: ಮಮತಾ ಗಟ್ಟಿ

ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ: ಮಮತಾ ಗಟ್ಟಿ

ಮಂಗಳೂರು: ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯನ್ನು ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ನಿಭಾಯಿಸುತ್ತಾ ಬಂದಿದ್ದು, ಅವರಿಗೆ ಆರ್ಥಿಕ ಸ್ವಾವಲಂಬನೆ ಅತ್ಯಂತ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.

​ಮಹಿಳಾ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳೆಯರು ಸಮಾಜದ ಶಕ್ತಿಯಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಅವರ ಖಾತೆಗೆ ಹಣ ಜಮೆಯಾಗುತ್ತಿರುವುದು ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಪೊಲೀಸ್ ಸಹಾಯಕ ಆಯುಕ್ತೆ ನಜ್ಮಾ ಫಾರೂಕಿ ಮಾತನಾಡಿ, ಮಹಿಳೆಯರು ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ, ಹಿಂದುಳಿದ ಪ್ರದೇಶಗಳಲ್ಲಿ ಇಂದಿಗೂ ಸ್ಥಾನಮಾನ ಪಡೆಯಲು ಹೋರಾಡಬೇಕಾದ ಪರಿಸ್ಥಿತಿ ಇದೆ. ಮಹಿಳಾ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಲ್ಲಿ 'ಗುಲಾಬಿ ಹೊಯ್ಸಳ' ತಂಡವಿದ್ದು, ಸುರಕ್ಷತೆಯ ವಿಷಯದಲ್ಲಿ ಸಮಾಜವು ಸಾಮೂಹಿಕ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.
​ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್ ಮಾತನಾಡಿ, ಮಹಿಳಾ ಸಶಕ್ತೀಕರಣಕ್ಕಾಗಿ ಪುರುಷ ಮತ್ತು ಮಹಿಳೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು ಎಂದರು.

ಸಮಾರಂಭದಲ್ಲಿ ಮಹಿಳಾ ಸಾಧಕರಾದ ಜ್ಯೋತಿ ಕೆ. ಉಳೆಪ್ಪಾಡಿ, ದೇವಿಕಾ ಪುರುಷೋತ್ತಮ್, ಪೂರ್ಣಿಮಾ ರೈ, ಪ್ರಮೀಳಾ ರಾವ್, ಜಯಶ್ರೀ ರಟ್ಟಿಹಳ್ಳಿ, ವಿಭಾ ಎಸ್. ನಾಯಕ್, ಡಾ. ರಶ್ಮಿ ಕೆ., ಸುಜಾತ, ಶ್ರದ್ಧಾ ಕೇಶವ ರಾಮಕುಂಜ, ಪೊಟ್ಟಮ್ಮ, ಲಕ್ಷ್ಮೀ ಗಾಣಿಗ ಮತ್ತು ದೀಕ್ಷಿತಾ ಟಿ.ಎಸ್. ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ., ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಕುಂತಳಾ, ರೋಟರಿ ಪದಾಧಿಕಾರಿಗಳಾದ ಡಾ. ಚಿನ್ನಗಿರಿ ಗೌಡ, ರಜನಿ ಭಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು. ಪ್ರಮೀಳಾ ಹೆಗ್ಡೆ ಮತ್ತು ಗೀತಾ ಬಿ. ರೈ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ