ಮೂಡುಬಿದಿರೆ : ಆಳ್ವಾಸ್ ಕಾಲೇಜಿನಲ್ಲಿ ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಹಾಗೂ ಜವಳಿ ಸಚಿವಾಲಯದ ಮಂಗಳೂರು ಆಯುಕ್ತರ ಕಚೇರಿ ಸಿದ್ಧಪಡಿಸಿದ 'ಯಕ್ಷಗಾನ ಗೊಂಬೆ ಆಟದ ಕುರಿತ ಸಂಶೋಧನಾ ಅಧ್ಯಯನ ವರದಿ' ಪುಸ್ತಕದ ಲೋಕಾರ್ಪಣೆ ನಡೆಯಿತು.
ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಅವರು, ಯಕ್ಷಗಾನ ಗೊಂಬೆ ಆಟವು ಕರಾವಳಿಯ ಅತ್ಯಂತ ಆಕರ್ಷಕ ಕಲೆಗಳಲ್ಲಿ ಒಂದು ಎಂದು ಬಣ್ಣಿಸಿದರು. 300 ರಿಂದ 400 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಕಲೆಯು ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮರ, ಬಟ್ಟೆ ಮತ್ತು ಚರ್ಮದಿಂದ ತಯಾರಿಸಿದ ಗೊಂಬೆಗಳನ್ನು ದಾರ ಅಥವಾ ಬಿದಿರಿನ ಕಡ್ಡಿಗಳ ಮೂಲಕ ಜೀವಂತಿಕೆಯೊಂದಿಗೆ ಪ್ರದರ್ಶಿಸುವ ಈ ಕಲೆಗೆ ಇಂದು ಆಧುನಿಕ ಮಾಧ್ಯಮಗಳ ಪೈಪೋಟಿಯಿಂದಾಗಿ ಅಸ್ತಿತ್ವದ ಭೀತಿ ಎದುರಾಗಿದೆ. ಈ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಹೆಚ್ಚಿನ ಬೆಂಬಲ ನೀಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಅವರು ಮಾತನಾಡಿ, ಕಲೆಯ ಬೆಳವಣಿಗೆಗೆ ಕಲಾವಿದನಲ್ಲಿರುವ ಶ್ರದ್ಧೆ ಮತ್ತು ನಿರಂತರ ಅಭ್ಯಾಸ ಬಹಳ ಮುಖ್ಯ ಎಂದರು. ಪ್ರಸ್ತುತ ಸಂಶೋಧನಾ ವರದಿಯು ಕೇಂದ್ರ ಸರ್ಕಾರಕ್ಕೆ ಈ ಕಲೆಯ ಪುನರುಜ್ಜೀವನಕ್ಕಾಗಿ ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಇವುಗಳು ಜಾರಿಗೆ ಬಂದಲ್ಲಿ ಯಕ್ಷಗಾನ ಗೊಂಬೆ ಆಟಕ್ಕೆ ಹೊಸ ಚೈತನ್ಯ ಲಭಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕರಕುಶಲ ಅಭಿವೃದ್ಧಿ ಸಚಿವಾಲಯದ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ.ಎಂ, ಸಹಾಯಕ ಡಿಸೈನರ್ ಅಶ್ವಿನ್ ಕುಮಾರ್, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್ ಕೈರೋಡಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಪ್ರಿಯಾ ಭಾರದ್ವಾಜ್ ಕಾರ್ಯಕ್ರಮ ನಿರೂಪಿಸಿದರು.