image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಸಭೆ

ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಸಭೆ

ಮೂಡುಬಿದಿರೆ: ಶಿಕ್ಷಕರು ಮತ್ತು ಪೋಷಕರು ಮಕ್ಕಳ ಗುರಿ ನಿರ್ಧಾರದಲ್ಲಿ ಸ್ಪಷ್ಟತೆ ನೀಡಿದಾಗ ಮಾತ್ರ ಅವರ ಸಾಧನೆ ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವ್ಯವಹಾರ ಆಡಳಿತ ವಿಭಾಗದ 2025-26ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದಿನ ವಿದ್ಯಾರ್ಥಿಗಳು ಉದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಂತಹ ಹತ್ತು ಹಲವು ಗೊಂದಲಗಳ ನಡುವೆಯೂ ತಮ್ಮ ಗುರಿಯತ್ತ ಗಮನ ಹರಿಸುತ್ತಿರುವುದು ಶ್ಲಾಘನೀಯ. ತರಗತಿ ಎಂಬುದು ಅತ್ಯಂತ ಪವಿತ್ರವಾದ ಸ್ಥಳವಾಗಿದ್ದು, ಅಲ್ಲಿ ನಾವು ಕಲಿಯುವ ವಿಷಯ ಮತ್ತು ನಡೆಸುವ ನಡವಳಿಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಲೆ, ಸಂಸ್ಕೃತಿ ಮತ್ತು ಸಂಗೀತದ ಮಹತ್ವದೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಯೋಚನೆಗಳನ್ನು ಬಿತ್ತುವ ವಾತಾವರಣವನ್ನು ನಿರ್ಮಿಸಿಕೊಡುತ್ತಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

​ಇದೇ ಸಂದರ್ಭದಲ್ಲಿ ಕಾಲೇಜಿನ ಸಾಧನೆಯ ಕುರಿತು ಮಾಹಿತಿ ನೀಡಿದ ಅವರು, ವ್ಯವಹಾರ ಆಡಳಿತ ವಿಭಾಗದ 75 ವಿದ್ಯಾರ್ಥಿಗಳು ಇನ್ಫೋಸಿಸ್‌ನ ಅಪ್ರೆಂಟಿಸ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರವಾದ ದೇಶದ ಏಕೈಕ ಸಂಸ್ಥೆ ಆಳ್ವಾಸ್ ಎಂದು ಹೆಮ್ಮೆಯಿಂದ ನುಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ ಮಾತನಾಡಿ, ಈ ಸಭೆಯು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಅರಿಯಲು ಪೋಷಕರಿಗೆ ಇರುವ ಅತ್ಯುತ್ತಮ ವೇದಿಕೆಯಾಗಿದೆ. ಪೋಷಕರು ಕಾಲಕಾಲಕ್ಕೆ ಶಿಕ್ಷಕರೊಂದಿಗೆ ಚರ್ಚಿಸಿ ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ಪಡೆಯಬೇಕು ಎಂದರು. ವಿಭಾಗದ ಮುಖ್ಯಸ್ಥೆ ಸುರೇಖಾ ಮಾತನಾಡಿ, ಪೋಷಕರು ತಮ್ಮ ಮಕ್ಕಳ ವಿಚಾರಗಳಿಗೆ ಕಿವಿಯಾಗಬೇಕು. ಅವರೊಂದಿಗೆ ಆತ್ಮೀಯವಾಗಿ ಸ್ಪಂದಿಸದಿದ್ದಲ್ಲಿ ಅವರು ತಮ್ಮ ವಿಚಾರ ಹಂಚಿಕೊಳ್ಳಲು ಬೇರೆಯವರನ್ನು ಅವಲಂಬಿಸಬಹುದು, ಇದು ಅವರ ದಾರಿ ತಪ್ಪಲು ಕಾರಣವಾಗಬಹುದು. ಆದ್ದರಿಂದ ಮಕ್ಕಳು ಯಾರೊಂದಿಗೆ ಸ್ನೇಹ ಬೆಳೆಸುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.

​ಕಾರ್ಯಕ್ರಮದಲ್ಲಿ ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಪ್ರಕಾಶಿನಿ ಪೂಜಾರಿ ಹಾಗೂ ಪ್ರಾಧ್ಯಾಪಕಿ ಪ್ರಜ್ಞಾ ಎಸ್.ಬಿ. ಉಪಸ್ಥಿತರಿದ್ದರು. ವಚನ ಶೆಟ್ಟಿ ಸ್ವಾಗತಿಸಿದರೆ, ಜಾನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಶೀತಲ್ ವಂದಿಸಿದರು.

Category
ಕರಾವಳಿ ತರಂಗಿಣಿ