ಮಂಗಳೂರು: ನಗರದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ ತೇಜಸ್ವಿ ಆರ್. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು (VTU) ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅಖಿಲ ತೇಜಸ್ವಿ ಅವರು ಬೆಳ್ಳಿಪಾಡಿ ಡಾ. ಶಮಂತ್ ರೈ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಮಂಡಿಸಿದ ಸಂಶೋಧನಾ ಪ್ರಬಂಧವಾದ "ಫ್ರೇಮ್ ವರ್ಕ್ ಆನ್ ಅಕ್ಸೆಲೆರೇಟಿಂಗ್ ಇಮೇಜ್ ಅನಾಲಿಸಿಸ್ ಥ್ರೂ ಡೀಪ್ ಲರ್ನಿಂಗ್ ಆಂಡ್ ನಾಲೆಜ್ ರೆಲಿಗೇಷನ್ ಯೂಸಿಂಗ್ ಗ್ರಾಫ್ ಡೇಟಾ ಸೈನ್ಸ್" (Framework on Accelerating Image Analysis through Deep Learning and Knowledge Relegation using Graph Data Science) ಅನ್ನು ವಿಶ್ವವಿದ್ಯಾನಿಲಯವು ಪುರಸ್ಕರಿಸಿ ಈ ಉನ್ನತ ಪದವಿಯನ್ನು ಪ್ರದಾನ ಮಾಡಿದೆ.
ನಾಡೇಲು ದಿ| ರವಿ ಪೂಜಾರಿ ಹಾಗೂ ಕುಸುಮಾವತಿ ದಂಪತಿಯ ಸುಪುತ್ರಿಯಾಗಿರುವ ಅಖಿಲ ತೇಜಸ್ವಿ ಅವರು, ಪಾಡಿ ಪಿಲ್ಯ ಶರತ್ ಕುಮಾರ್ ಅವರ ಧರ್ಮಪತ್ನಿಯಾಗಿದ್ದಾರೆ. ಇವರ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.