image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ 31ನೇ ಪದವಿ ಪ್ರದಾನ ಸಮಾರಂಭ

ಧರ್ಮಸ್ಥಳದಲ್ಲಿ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ 31ನೇ ಪದವಿ ಪ್ರದಾನ ಸಮಾರಂಭ

ಧರ್ಮಸ್ಥಳ: ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಪ್ರಚಾರದ ಮೂಲಕ ವ್ಯಸನಮುಕ್ತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಕರೆ ನೀಡಿದರು.

​ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ನಡೆದ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ 31ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

​ಆಧುನಿಕ ಜೀವನಶೈಲಿ ಮತ್ತು ತಪ್ಪು ಆಹಾರ ಕ್ರಮಗಳಿಂದಾಗಿ ಯುವಜನತೆ ಪ್ರಕೃತಿಯಿಂದ ವಿಮುಖರಾಗುತ್ತಿದ್ದಾರೆ. ವಿಶೇಷವಾಗಿ ಯುವತಿಯರು ಕೂಡ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಪ್ರಾಚೀನ ಕಾಲದಿಂದಲೂ ಭಾರತೀಯರು ಯೋಗ ಮತ್ತು ಭಕ್ತಿ ಮಾರ್ಗಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಈ ಪರಂಪರೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಬೆಸೆಯಲು ಬೆಂಗಳೂರಿನಲ್ಲಿ 60 ಎಕರೆ ಪ್ರದೇಶದಲ್ಲಿ ಶೀಘ್ರದಲ್ಲೇ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

​ನೂತನ ಪದವೀಧರರು ಕೇವಲ ವೃತ್ತಿಪರರಾಗದೆ, ರೋಗಿಗಳ ಸೇವೆಯಲ್ಲಿ ಮಾನವೀಯತೆ, ದಯೆ ಮತ್ತು ಅನುಕಂಪವನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಸಂಶೋಧನೆ ಮತ್ತು ಅಧ್ಯಯನದ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೆ, ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದ ಅವರು, ವಿಶ್ವವಿದ್ಯಾಲಯದಿಂದ ಕಾಲೇಜಿನ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

​ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಸುಜಾತೆ ಕೆ.ಜೆ. ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಉಪನ್ಯಾಸಕಿ ಡಾ. ಗೀತಾ ಬಿ. ಶೆಟ್ಟಿ ಅವರು ಪ್ರಥಮವಾಗಿ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು, ಆಸ್ಪತ್ರೆ ಬೆಳೆದು ಬಂದ ಹಾದಿಯನ್ನು ಸ್ಮರಿಸಿ ವೈದ್ಯಕೀಯ ತಂಡದ ಸೇವೆಯನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು.

​ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರೆ, ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಕೆ. ವಂದಿಸಿದರು. ಡಾ. ರಿಷಿಕಾ ಮತ್ತು ಕುಮಾರಿ ಕಾವ್ಯ ಎಂ. ಕಾರ್ಯಕ್ರಮ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ