image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕ್ಯಾನ್ಸರ್ ಜಾಗೃತಿಯಲ್ಲಿ ಭರವಸೆಯ ಹೊಸ ಮುನ್ನುಡಿ: 10,000 ಮನೆಗಳ ಬೃಹತ್ ಸಮೀಕ್ಷಾ ವರದಿ ಬಿಡುಗಡೆ

ಕ್ಯಾನ್ಸರ್ ಜಾಗೃತಿಯಲ್ಲಿ ಭರವಸೆಯ ಹೊಸ ಮುನ್ನುಡಿ: 10,000 ಮನೆಗಳ ಬೃಹತ್ ಸಮೀಕ್ಷಾ ವರದಿ ಬಿಡುಗಡೆ

ಮಂಗಳೂರು : ಮಂಗಳೂರಿನ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಮತ್ತು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿ (M.I.O) ಸಂಯುಕ್ತವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಸಿದ '10,000+ ಮನೆಗಳ ಕ್ಯಾನ್ಸರ್ ಜಾಗೃತಿ ಸಮೀಕ್ಷೆ'ಯ ವರದಿ ಪುಸ್ತಕವನ್ನು ಶನಿವಾರ ಮಾರ್ಚ್ 21 ರಂದು ಬಿಡುಗಡೆ ಮಾಡಲಾಯಿತು. ಈ ಸಮೀಕ್ಷೆಯಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ಸಮುದಾಯದ 10,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಬಗ್ಗೆ ಸಾರ್ವಜನಿಕರಲ್ಲಿರುವ ಅರಿವು ಹಾಗೂ ಅಡೆತಡೆಗಳ ಕುರಿತು ಪ್ರಮುಖ ಒಳನೋಟಗಳನ್ನು ನೀಡಿದೆ. ಸಮೀಕ್ಷೆಯ ವರದಿಯ ಪ್ರಕಾರ, ಶೇ. 90ಕ್ಕಿಂತ ಹೆಚ್ಚು ಜನರಿಗೆ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಅರಿವಿದ್ದು, ಕ್ಯಾನ್ಸರ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ ಎಂಬುದು ಬಹುತೇಕರಿಗೆ ತಿಳಿದಿದೆ. ಆದರೆ, ಆರಂಭಿಕ ಪತ್ತೆಯ ಮಹತ್ವದ ಬಗ್ಗೆ ಅರಿವಿದ್ದರೂ ಸಹ ಕೇವಲ ಶೇ. 15ಕ್ಕಿಂತ ಕಡಿಮೆ ಜನರು ಮಾತ್ರ ನಿಯಮಿತ ತಪಾಸಣೆಗೆ ಒಳಗಾಗುತ್ತಿದ್ದಾರೆ. ರೋಗ ಪತ್ತೆಯ ಭಯ, ಚಿಕಿತ್ಸಾ ವೆಚ್ಚದ ಆತಂಕ ಮತ್ತು ಆಸ್ಪತ್ರೆಗಳ ದೂರವು ಜನರು ತಪಾಸಣೆಯಿಂದ ಹಿಂದೆ ಸರಿಯಲು ಪ್ರಮುಖ ಕಾರಣಗಳಾಗಿವೆ ಎಂದು ವರದಿ ತಿಳಿಸಿದೆ. ಈ ಸಮೀಕ್ಷೆಯ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಇದು ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆಗೆ ಸಂಬಂಧಿಸಿದ ಆರೋಗ್ಯ ನೀತಿಗಳನ್ನು ರೂಪಿಸಲು ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಡಿ ಸುರೇಶ್ ರಾವ್ ವಹಿಸಿದ್ದರು ಮತ್ತು ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ ಹಾಗೂ ಡೈಜಿವರ್ಲ್ಡ್ ಸಂಸ್ಥಾಪಕ ಶ್ರೀ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ