image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ ಹಿಂದೂ: ದಾಖಲೆ ಬಿಡುಗಡೆ

ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ ಹಿಂದೂ: ದಾಖಲೆ ಬಿಡುಗಡೆ

ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ನರ್ತನ ಸೇವೆ ನೀಡಿದ ಸುಶಾಂತ್ ಬಂಗೇರ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂಬ ಆರೋಪ ಸುಳ್ಳು ಮತ್ತು ಅವರು ಹಿಂದೂ ಪಂಬದ ಸಮುದಾಯದವರಾಗಿದ್ದಾರೆ ಎಂದು ದೈವನರ್ತಕ ಸೂರಜ್ ಚಿಪ್ಪಾರು ಸ್ಪಷ್ಟಪಡಿಸಿದ್ದಾರೆ.

​ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಡಾ. ರತಿ ಅವರು ಸುಶಾಂತ್ ಬಂಗೇರ ಕ್ರಿಶ್ಚಿಯನ್ ಮಹಿಳೆಯ ಮಗ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ. ಸುಶಾಂತ್ ಅವರ ತಂದೆ ಗಣೇಶ್ ಪದವಿನಂಗಡಿ ಅವರು ಕ್ರಿಶ್ಚಿಯನ್ ಮಹಿಳೆಯನ್ನು ವಿವಾಹವಾಗಿರುವುದು ನಿಜವಾದರೂ, ಆಕೆ ಮದುವೆಯಾದ ಸಂದರ್ಭದಲ್ಲೇ ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ. ಕಾನೂನುಬದ್ಧವಾಗಿ ಸುಶಾಂತ್ ಅವರು ಪಂಬದ ಜನಾಂಗಕ್ಕೆ ಸೇರಿದವರಾಗಿದ್ದು, ಅವರ ಜಾತಿ ಪ್ರಮಾಣಪತ್ರವು ಅದನ್ನು ಸಾಬೀತುಪಡಿಸುತ್ತದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಹಿರಿಯ ದೈವನರ್ತಕ ಗಣೇಶ್ ಪಂಬದ ಮಾತನಾಡಿ, ಬೋಳೂರಿನಲ್ಲಿ ನಡೆದ ಸೇವೆಯಲ್ಲಿ ಯಾವುದೇ ಶಾಸ್ತ್ರೋಕ್ತ ಲೋಪಗಳಾಗಿಲ್ಲ. ದೈವದ ಅಪ್ಪಣೆಯಂತೆಯೇ ಶ್ರದ್ಧಾಭಕ್ತಿಯಿಂದ ಸೇವೆ ನಡೆದಿದೆ. ಕಳೆದ 31 ವರ್ಷಗಳಿಂದ ತಾವು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವಿವಿಧ ಮಾಗಣೆಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು, ಸರಿ-ತಪ್ಪುಗಳ ಅರಿವು ತಮಗಿದೆ. ಭಕ್ತರ ಆಹ್ವಾನದ ಮೇರೆಗೆ ಮುಂದೆಯೂ ಸೇವೆ ಮುಂದುವರಿಸುವುದಾಗಿ ತಿಳಿಸಿದರು.
​ಸುಶಾಂತ್ ಬಂಗೇರ ಮಾತನಾಡಿ, "ನನ್ನನ್ನು ಕ್ರೈಸ್ತ ಧರ್ಮದವನು ಎಂದು ಸುಳ್ಳು ಆರೋಪ ಮಾಡುವ ಮೂಲಕ ಅವಮಾನಿಸಲಾಗಿದೆ. ವೈಯಕ್ತಿಕ ಲಾಭಕ್ಕಾಗಿ ನನ್ನ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಇದರಿಂದ ನನಗೆ ದೈವನರ್ತನ ಸೇವೆ ಮಾಡಲು ಮಾನಸಿಕವಾಗಿ ಕಷ್ಟವಾಗುತ್ತಿದೆ. ಆರೋಪ ಮಾಡಿದವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು," ಎಂದು ಒತ್ತಾಯಿಸಿದರು.
​ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಕಜೆ, ಕಮಲಾಕ್ಷ ಪಂಬದ ಗಂಧಕಾಡು ಹಾಗೂ ಸವಿತಾ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ