ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಬೆಂಗ್ರೆ ಶಿವಾಜಿ ಆಟೋ ಪಾರ್ಕ್‌ಗೆ ವಿಶೇಷ ಅನುದಾನದಡಿ ಮೇಲ್ಛಾವಣಿ ಅಳವಡಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ಅಧಿಕೃತವಾಗಿ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಆಟೋ ರಿಕ್ಷಾ ಚಾಲಕರು ಸಮಾಜದ ಶ್ರಮಿಕ ವರ್ಗದ ಪ್ರಮುಖ ಭಾಗವಾಗಿದ್ದು, ದಿನವಿಡೀ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಅವರು ತಮ್ಮ ಜೀವನೋಪಾಯದ ಮೂಲವಾದ ಆಟೋಗಳ ಬಗ್ಗೆಯೂ ಅಪಾರ ಕಾಳಜಿ ಹೊಂದಿರುತ್ತಾರೆ. ತಾವು ಬಿಸಿಲಿನಲ್ಲಿ ನಿಂತು ದುಡಿದರೂ, ತಮ್ಮ ವಾಹನಗಳು ನೆರಳಿನಲ್ಲಿ ಸುರಕ್ಷಿತವಾಗಿರಬೇಕು ಎಂಬುದು ಅವರ ದೀರ್ಘಕಾಲದ ಬಯಕೆಯಾಗಿತ್ತು. ಈ ಹಿಂದಿನ ಅವರ ಮನವಿಯನ್ನು ಪುರಸ್ಕರಿಸಿ, ಇದೀಗ ವಿಶೇಷ ಅನುದಾನದ ಮೂಲಕ ಇಲ್ಲಿ ಸುಸಜ್ಜಿತ ಮೇಲ್ಛಾವಣಿ ನಿರ್ಮಾಣವಾಗುತ್ತಿದ್ದು, ಇದರಿಂದ ಸ್ಥಳೀಯ ಚಾಲಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಲೋಕೇಶ್ ಬೆಂಗ್ರೆ, ಮೀರಾ ಕರ್ಕೇರ, ನಿತಿನ್ ಕುಮಾರ್, ವಿನೋದ್ ಮೆಂಡನ್, ಅನಿಲ್, ಕಿಶೋರ್ ಕೊಟ್ಟಾರಿ, ಸುರೇಂದ್ರ ಪಾಂಗಳ್, ಗಂಗಾಧರ, ಸಂಜಯ್ ಸುವರ್ಣ, ಧನಂಜಯ ಪುತ್ರನ್, ಚೇತನ್ ಬೆಂಗ್ರೆ, ವಿಥುನ್, ವಾಸು ಸುವರ್ಣ, ಸುಂದರ ಸಾಲ್ಯಾನ್, ಸುಕುಮಾರ, ಜೀವನ್ ಖಾರ್ವಿ ಸೇರಿದಂತೆ ವಾರ್ಡಿನ ಕಾರ್ಯಕರ್ತರು ಹಾಗೂ ಸ್ಥಳೀಯ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.