ಮಂಗಳೂರು : ರಕ್ತದಾನ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ಅತ್ಯಂತ ಪುಣ್ಯದ ಕಾರ್ಯವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಈ ಮಹತ್ವದ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು
ರೆಡ್ ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ನಗರದ ಶ್ರೀ ರಾಮಕೃಷ್ಣ ಕಾಲೇಜಿನ ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಅಕ್ಷರ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಲಯನ್ಸ್ ಕ್ಲಬ್ ನೇತ್ರಾವತಿ ಸಹಯೋಗದಲ್ಲಿ ಬುಧವಾರ ರಾಮಕೃಷ್ಣ ಕಾಲೇಜಿನ ಗೀತಾ ಎಸ್. ಎಂ. ಶೆಟ್ಟಿ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ನೇತ್ರಾವತಿ ಅಧ್ಯಕ್ಷೆ ವಿನಯ ಶೆಟ್ಟಿ, ಲಯನ್ಸ್ ಪ್ರಾದೇಶಿಕ ಅಧ್ಯಕ್ಷೆ ಗಾಯತ್ರಿ ರಾವ್, ವಲಯ ಅಧ್ಯಕ್ಷೆ ನಿರ್ಮಲಾ ಪ್ರಮೋದ್,
ಖಜಾಂಚಿ ಚಂಚಲಾಕ್ಷಿ ಶೆಟ್ಟಿ, ರೆಡ್ ಕ್ರಾಸ್ ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕ ಡಾ ಸಚ್ಚಿದಾನಂದ ರೈ, ಬ್ಲಡ್ ಬ್ಯಾಂಕ್ ನ ಡಾ. ಸುಕೇಶ್ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ. ಬಿ. ಸಂಜೀವ ರೈ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಉಪ ಪ್ರಾಂಶುಪಾಲೆ ಪ್ರತಿಭಾ ಶೆಟ್ಟಿ, ಕಾರ್ಯಕ್ರಮಾಧಿಕಾರಿ ಸುಮನಾ ರೈ ಉಪಸ್ಥಿತರಿದ್ದರು.
ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸುಮಾರು 100 ಯುನಿಟ್ ರಕ್ತದಾನ ಮಾಡಿದರು.