image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವೈಫಲ್ಯ: ನಾಳೆ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು ಮಹಾನಗರ ಪಾಲಿಕೆ ವೈಫಲ್ಯ: ನಾಳೆ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

​ಮಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ದುರಾಡಳಿತ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಮಂಗಳೂರು ದಕ್ಷಿಣ ಮತ್ತು ಉತ್ತರ ಮಂಡಲದ ನೇತೃತ್ವದಲ್ಲಿ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 18, ಬುಧವಾರ ಮಧ್ಯಾಹ್ನ 3.30ಕ್ಕೆ ಸರಿಯಾಗಿ ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿ ಮುಂಭಾಗದಲ್ಲಿ ಈ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ಚುನಾವಣೆ ನಡೆಸದೆ, ಆಡಳಿತಾಧಿಕಾರಿ ಮೂಲಕ ಸರ್ಕಾರ ನಡೆಸುತ್ತಿರುವ ಆಡಳಿತದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಲ್ಲದ ಕಾರಣ ಸಾರ್ವಜನಿಕರು ಇಂದಿಗೂ ನಿಕಟಪೂರ್ವ ಸದಸ್ಯರನ್ನೇ ಅವಲಂಬಿಸಿದ್ದಾರೆ. ಆದರೆ ಅಧಿಕಾರಿಗಳು ಮಾಜಿ ಸದಸ್ಯರಿಗೂ ಸೂಕ್ತ ಗೌರವ ಅಥವಾ ಸ್ಪಂದನೆ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ನಗರದಲ್ಲಿ ಇ-ಖಾತಾ ವಿತರಣೆಯಲ್ಲಿ ವಿಳಂಬ, ಜನನ-ಮರಣ ಪ್ರಮಾಣಪತ್ರ ಪಡೆಯಲು ತಿಂಗಳುಗಟ್ಟಲೆ ಅಲೆದಾಟ, ಕುಡಿಯುವ ನೀರಿನ ಅಭಾವ ಹಾಗೂ ಸಮರ್ಪಕ ಕಸ ವಿಲೇವಾರಿಯಾಗದ ಕಾರಣ ಜನರು ರೋಸಿ ಹೋಗಿದ್ದಾರೆ.
ಈ ಎಲ್ಲ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಲು, ವಿಶೇಷವಾಗಿ ಇ-ಖಾತಾ ಸಮಸ್ಯೆ ಎದುರಿಸುತ್ತಿರುವವರು, ಕುಡಿಯುವ ನೀರು ಹಾಗೂ ಕಸದ ಸಮಸ್ಯೆಯಿಂದ ಹೈರಾಣಾಗಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಮಂಡಲ ಪ್ರಕಟಣೆಯಲ್ಲಿ ವಿನಂತಿಸಿದೆ.

Category
ಕರಾವಳಿ ತರಂಗಿಣಿ