ಮಂಗಳೂರು: ಕಳವಾರು ಗ್ರಾಮದ ಸುಮಾರು 1200 ವರ್ಷಗಳ ಇತಿಹಾಸವಿರುವ ಪುರಾಣ ಪ್ರಸಿದ್ಧ ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದಲ್ಲಿ ಮಾ. 20ರಿಂದ 29ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಅತ್ಯಂತ ವೈಭವದಿಂದ ಜರುಗಲಿದೆ ಎಂದು ಪ್ರದಾನ ಕಾರ್ಯದರ್ಶಿ ಬಿ ರವಿಂದ್ರ ರಾವ್ ತಿಳಿಸಿದರು. ಅವರುನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಭಕ್ತರ ಸಹಕಾರದೊಂದಿಗೆ ಪೂರ್ಣಗೊಂಡಿದ್ದು, ಮಾ. 27ರ ಶುಕ್ರವಾರ ಬೆಳಿಗ್ಗೆ 10:51ಕ್ಕೆ ಒದಗುವ ಶುಭ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ನಡೆಯಲಿವೆ.
ಕ್ಷೇತ್ರದ ಭಕ್ತರು, ಸ್ಥಳೀಯ ಶಾಸಕರು ಹಾಗೂ ಸಂಸದರ ಮಾರ್ಗದರ್ಶನದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ಸುಮಾರು 2.5 ಕೋಟಿ ರೂ.ಗಳ ಸಹಕಾರದೊಂದಿಗೆ ದೇವಸ್ಥಾನದ ವಿವಿಧ ಜೀರ್ಣೋದ್ಧಾರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮಾ. 20ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ತೋರಣ ಮುಹೂರ್ತದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಪ್ರತಿದಿನ ಧಾರ್ಮಿಕ ಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಈ ಐತಿಹಾಸಿಕ ಸಂದರ್ಭದ ಸವಿನೆನಪಿಗಾಗಿ ದೇವಸ್ಥಾನದ ಇತಿಹಾಸ ಹಾಗೂ ಮಾಹಿತಿಗಳನ್ನು ಒಳಗೊಂಡ 'ಶಿವಸ್ತುತಿ' ಎಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಈ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಗಜೀವನ್ ಶೆಟ್ಟಿ, ಪದ್ಮನಾಭ ಬಿ, ಬಾಳ ಗಂಗಾದರ ಪೂಜಾರಿ, ಯತಿರಾಜ್ ಡಿ ಸಾಲ್ಯಾನ್, ಚೇತನ್ ಕುಮಾರ್ ಉಪಸ್ಥಿತರಿದ್ದರು.