ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಧನಸಹಾಯ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಜರಗಿತು. ಒಕ್ಕೂಟವು ದತ್ತು ಸ್ವೀಕರಿಸಿ ಮಾಸಿಕ ಧನಸಹಾಯ ನೀಡುತ್ತಾ ಬಂದಿರುವ ವಿವಿಧ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಸಹಾಯಧನದ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ, ಸಮಾಜದ ಆರ್ಥಿಕವಾಗಿ ಹಿಂದುಳಿದವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಒಕ್ಕೂಟವು ನಿರಂತರವಾಗಿ ಇಂತಹ ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಹಾಗೂ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ, ಒಕ್ಕೂಟದ ಸಂಚಾಲಕರಾದ ಕೊಲ್ಲಾಡಿ ಬಾಲಕೃಷ್ಣ ರೈ, ಆಹ್ವಾನಿತ ಸದಸ್ಯರಾದ ರವಿರಾಜ್ ಶೆಟ್ಟಿ ಜತ್ತಬೆಟ್ಟು ಸೇರಿದಂತೆ ಹಲವು ಫಲಾನುಭವಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.