ಮಂಗಳೂರು: ಮಧ್ಯಪ್ರಾಚ್ಯ ದೇಶಗಳ ಯುದ್ಧದ ಬಿಸಿಯು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಜೊತೆಗಾರರಿಗೆ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆಗೂ ತಟ್ಟಿದೆ.
ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಳೆದ ಎಂಟು ವರ್ಷಗಳಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತು ಆರು ತಿಂಗಳಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ರಾತ್ರಿ ಸುಮಾರು 400 ಮಂದಿಗೆ ಊಟ ನೀಡಲಾಗುತ್ತಿತ್ತು. ಸ್ವಂತ ಕಿಚನ್‌ನಲ್ಲಿ ವಾರದಲ್ಲಿ ಐದು ದಿನ ಚಪಾತಿ- ಪಲ್ಯ ಮತ್ತು ಎರಡು ದಿನ ಇಡ್ಲಿ- ಸಾರು ಸಿದ್ಧಪಡಿಸಿ ನೀಡಲಾಗುತ್ತಿದೆ. ಒಂದು ದಿನವೂ ನಿಲ್ಲದೆ ಸುಸೂತ್ರವಾಗಿ ನಿರಂತರ ಕಾರುಣ್ಯ ಯೋಜನೆ ನಡೆದುಕೊಂಡು ಬಂದಿದೆ.
ಇರಾನ್ ಮೇಲೆ ಅಮೆರಿಕ ದಾಳಿ ಮತ್ತು ನಂತರ ಗಲ್ಫ್ ದೇಶದಗಳಲ್ಲಿ ನಡೆಯುತ್ತಿರುವ ದಾಳಿಗಳು, ಯುದ್ಧದ ಕಾರ್ಮೋಡದಿಂದ ಭಾರತಾದ್ಯಂತ ವಾಣಿಜ್ಯ ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ವೆನ್ಲಾಕ್ ಆಸ್ಪತ್ರೆಯ ಕಾರುಣ್ಯ ಯೋಜನೆಯ ಅಡುಗೆಗೂ ಅನಿಲ ಪೂರೈಕೆ ಇಲ್ಲದೆ, ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವ ಕಾರಣಕ್ಕೂ ಬಡವರಿಗೆ, ಕಷ್ಟದಲ್ಲಿರುವವರಿಗೆ ಆಹಾರ ಪೂರೈಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ಕಟ್ಟಿಗೆ ಮೂಲಕ ಒಲೆ ಉರಿಸಿ, ಆಹಾರ ತಯಾರಿಸಲಾಗುತ್ತಿದೆ. ಸದ್ಯ ವೆಜ್ ಬಿರಿಯಾನಿ ಅಥವಾ ಅನ್ನ ಸಾಂಬರ್ ಮಾತ್ರ ಪೂರೈಸಲು ಸಾಧ್ಯವಾಗಲಿದೆ. ಅಡುಗೆ ಅನಿಲದ ಸಮಸ್ಯೆ ಪರಿಹಾರವಾಗುವ ತನಕ ಜಿಲ್ಲಾಡಳಿತ ಅಥವಾ ಸಹೃದಯರು 4-5 ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಟ್ಟರೆ, ಇಡ್ಲಿ, ಚಪಾತಿ ಮಾಡಿ ಕೊಡಬಹುದು ಎನ್ನುತ್ತಿದ್ದಾರೆ ಎಮ್ ಫ್ರೆಂಡ್ ನ ಸದಸ್ಯರು.