ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಮಳೆಯಿಂದ ಉಂಟಾದ ಹಾನಿಗಳನ್ನು ಸರಿಪಡಿಸಲು ಮತ್ತು ಕುಸಿದು ಬಿದ್ದ ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರವು ಸುಮಾರು 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾ ಅವರು ಶನಿವಾರ ವಿವಿಧ ಮಂಜೂರಾದ ಕಾಮಗಾರಿಗಳ ಸ್ಥಳ ವೀಕ್ಷಣೆ ನಡೆಸಿದರು.
ಸರ್ಕಾರವು ಬಿಡುಗಡೆ ಮಾಡಿರುವ ಅನುದಾನದಲ್ಲಿ ಪ್ರಮುಖವಾಗಿ, ಕನ್ನಗುಡ್ಡೆ ಪ್ರದೇಶದ ಸಂತೋಷ್ ಅವರ ಮನೆ ಸಮೀಪದ ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ₹10 ಲಕ್ಷ. ಕೋಡಕ್ಕಲ್ ಅಂಡರ್ ಪಾಸ್ ಬಳಿ ಹಾಗೂ ವೈದ್ಯಕೋಡಿ ಬಳಿಯ ರಾಜಕಾಲುವೆ ತಡೆಗೋಡೆಗೆ ₹30 ಲಕ್ಷ. ಜನಪ್ರಿಯ ಆಸ್ಪತ್ರೆ ಹಿಂಭಾಗ ಹಾಗೂ ಫಾಸ್ಟ್ ನ್ಯೂರೋ ಆಸ್ಪತ್ರೆ ಬಳಿಯ ರಾಜಕಾಲುವೆ ಕಾಮಗಾರಿಗಳಿಗೆ ₹30 ಲಕ್ಷ. ಶಾಂತಿನಗರದ ಮುಸ್ತಫಾ ಅವರ ಮನೆ ಬಳಿ ₹25 ಲಕ್ಷ ಹಾಗೂ ರಾಧಾಕೃಷ್ಣ ಅವರ ಮನೆ ಬಳಿ ಮತ್ತು ಪಂಡೆಲ್‌ಗುಡ್ಡೆ ಕಾಲುದಾರಿ ತಡೆಗೋಡೆಗೆ ₹30 ಲಕ್ಷ ವೆಚ್ಚದ ಕಾಮಗಾರಿಗಳು ನಡೆಯಲಿವೆ.
ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಐವನ್ ಡಿ’ಸೋಜಾ ಅವರು, "ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಆರೋಪ ಮಾಡುತ್ತಿವೆ" ಎಂದು ಕಳವಳ ವ್ಯಕ್ತಪಡಿಸಿದರು. ಸರ್ಕಾರವು ಈಗಾಗಲೇ ಹೂಳೆತ್ತಲು ₹3.5 ಕೋಟಿ ಹಾಗೂ ಮುಖ್ಯಮಂತ್ರಿಯವರ ವಿಶೇಷ ಯೋಜನೆಯಡಿ ₹25 ಕೋಟಿ ಬಿಡುಗಡೆ ಮಾಡಿದೆ ಎಂದು ಅವರು ಸ್ಪಷ್ಟಪಡಿಸಿದರು. ಮುಂದಿನ ಮಳೆಗಾಲ ಆರಂಭವಾಗುವ ಮೊದಲೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್‌ಗಳಾದ ಅಶ್ರಫ್ ಬಜಾಲ್, ಪ್ರೇಮ್ ಬಳ್ಳಾಲಬಾಗ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಮುಖಂಡರಾದ ರಫೀಕ್ ಕಣ್ಣೂರು, ಡೆನಿಸ್ ಡಿ’ಸಿಲ್ವಾ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.