ಮುಲ್ಕಿ: ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭವು ಶನಿವಾರ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಗಣ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು, ಮುಲ್ಕಿ ಕಂಡ ಧೀಮಂತ ವ್ಯಕ್ತಿ ಮುಲ್ಕಿ ಸುಂದರ ರಾಮ ಶೆಟ್ಟಿಯವರ ಹೆಸರಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ. ಸುಮಾರು 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಭವ್ಯ ಭವನವು ಇಂದು ಅನೇಕರಿಗೆ ಆಸರೆಯಾಗಿದೆ. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ ಮತ್ತು ಅವರ ಸ್ಮರಣೆಯಿಂದ ಅನೇಕ ಕುಟುಂಬಗಳಿಗೆ ನೆಮ್ಮದಿ ಸಿಕ್ಕಿದೆ. ಇಲ್ಲಿ ಸಹಾಯಹಸ್ತ ಸ್ವೀಕರಿಸಿದವರು ಮುಂದೆ ತಾವೂ ಕೂಡ ಅವರಂತೆ ಸಮಾಜಕ್ಕೆ ದಾರಿದೀಪವಾಗಬೇಕು ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಜೀವನದಲ್ಲಿ ಕಷ್ಟ ಬಂದಾಗ ಕೈಹಿಡಿದು ಮೇಲೆತ್ತಿದವರನ್ನು ಎಂದಿಗೂ ಮರೆಯಬಾರದು. ಇಲ್ಲಿ ಆರ್ಥಿಕ ನೆರವು ಪಡೆದವರು ಭವಿಷ್ಯದಲ್ಲಿ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಪ್ರಕಾಶ್ ಶೆಟ್ಟಿ ಅವರು ಆಸ್ತಿಗಿಂತ ಹೆಚ್ಚಾಗಿ ಹೃದಯ ಶ್ರೀಮಂತಿಕೆಯನ್ನು ಹೊಂದಿದ್ದಾರೆ. ಸದಾ ಜನರ ಸಂಕಷ್ಟಕ್ಕೆ ಮಿಡಿಯುವ ಅವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದು ಶುಭ ಹಾರೈಸಿದರು. ದೈಜಿ ವರ್ಲ್ಡ್ ಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಸುಂದರ ರಾಮ ಶೆಟ್ಟಿಯವರ ಹಾದಿಯಲ್ಲೇ ಸಾಗುತ್ತಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ಅಪರೂಪದ್ದು ಎಂದರು.
ವೇದಿಕೆಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಸುಂದರ ರಾಮ ಶೆಟ್ಟಿಯವರ ಸುಪುತ್ರ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿ ಬಾಲಕೃಷ್ಣ ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಹಾಗೂ ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ಗುರ್ಮೆ ವಂದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ 300 ಕುಟುಂಬಗಳಿಗೆ ಹಾಗೂ ವಿದ್ಯಾಸಂಸ್ಥೆಗಳಿಗೆ ಒಟ್ಟು 50 ಲಕ್ಷ ರೂಪಾಯಿಗಳ ಸಹಾಯ ಧನವನ್ನು ವಿತರಿಸಲಾಯಿತು.