ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನವನ್ನು ಇಂದು ಬೆಳಿಗ್ಗೆ ಮಂಗಳಾದೇವಿ ದೇವಸ್ಥಾನದ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಅರುಣ್ ಐತಾಳ್, ಮಂಗಳಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲರಾದ ಪ್ರತಿಜ್ಞಾ ಸುಹಾಸಿನಿ, ಪರಿಸರ ಪ್ರೇಮಿ ಅರ್ಜುನ್ ಮಸ್ಕರೇನಸ್ ಹಾಗೂ ಮಂಗಳಾದೇವಿ ಸೇವಾಸಮಿತಿಯ ಖಜಾಂಜಿ ವಿಶ್ವನಾಥ್, ಮಂಗಳಾದೇವಿ ದೇವಸ್ಥಾನದ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಗಣ್ಯರು ಸಾಂಕೇತಿಕವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳಾದೇವಿ ಸೇವಾಸಮಿತಿಯ ಅಧ್ಯಕ್ಷರಾದ ದಿಲ್ ರಾಜ್ ಆಳ್ವ, ಕಾರ್ಯದರ್ಶಿಗಳಾದ ತಿಲಕ್ ರಾಜ್, ಕಮಲಾಕ್ಷ ಪೈ, ಸತ್ಯನಾರಾಯಣ ಕೆ. ವಿ., ಉಮಾನಾಥ್ ಕೋಟೆಕ್ಕಾರ್ ಮತ್ತು ರಂಜನ್ ಬೆಳ್ಳರ್ಪ್ಪಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಐತಾಳ್ "ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳಾದೇವಿ ದೇವಸ್ಥಾನದ ರಥಬೀದಿಯ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುವುದು ನಿಜಕ್ಕೂ ಸಂತಸ ತಂದಿದೆ. ಯುವಕರನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಸ್ವಚ್ಛತೆಯ ಕುರಿತಾದ ಜಾಗೃತಿ ಮೂಡುತ್ತದೆ. ಮುಂದೆ ಅವರು ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ನಿರ್ಮಾಣ ಮಾಡುವಲ್ಲಿ ಈ ಕಾರ್ಯ ಸಹಕಾರಿಯಾಗುತ್ತದೆ. ಮುಂದೆ ಈ ಯುವಕರು ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕಾರ್ಯದಲ್ಲಿ ಭಾಗಿಗಳಾಗಲಿ. ರಾಮಕೃಷ್ಣ ಮಿಷನ್ ನ ಈ ಕಾರ್ಯ ಇನ್ನಷ್ಟು ಉತ್ತಮವಾಗಿ ಮುಂದುವರೆಯಲಿ" ಎಂದು ಹೇಳಿ ಶುಭ ಹಾರೈಸಿದರು.
ಮಂಗಳಾ ಸಮೂಹ ಸಂಸ್ಥೆಗಳ ಪ್ರಾಂಶುಪಾಲರಾದ ಪ್ರತಿಜ್ಞಾ ಸುಹಾಸಿನಿ ಅವರು ಮಾತನಾಡಿ "ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಗೆ ಭಾಗಿಗಳಾಗಲು ಅವಕಾಶ ಕೊಟ್ಟ ರಾಮಕೃಷ್ಣ ಮಠದ ಸ್ವಾಮೀಜಿಗಳಿಗೆ ಹಾಗೂ ರಾಮಕೃಷ್ಣ ಮಿಷನ್ ನ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಸಹಕಾರ ಎಂದಿಗೂ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗಿರುವುದು ನಿಜಕ್ಕೂ ಶ್ಲಾಘನೀಯ. ಈ ಕಾರ್ಯವನ್ನು ವಿದ್ಯಾರ್ಥಿಗಳು ಮುಂದುವರಿಸಬೇಕು " ಎಂದು ಹೇಳಿದರು.
ಸ್ವಯಂಸೇವಕರಾದ ದಾಮೋದರ್ ನಾಯಕ್, ಅವಿನಾಶ್ ಅಂಚನ್, ಅಚಲ್, ವಿಜೇಶ್ ದೇವಾಡಿಗ, ಬಾಲಕೃಷ್ಣ ಭಟ್, ಸಚಿನ್ ಶೆಟ್ಟಿ ನಲ್ಲೂರು, ಸಜಿತ್ ಕೆ ನೇತೃತ್ವದಲ್ಲಿ ಮಂಗಳಾ ಕಾಲೇಜ್ ಒಫ್ ನರ್ಸಿಂಗ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್ ನ ರಾಷ್ಟೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಮಿಥುನ್ ವೇಣುಗೋಪಾಲ್, ಪ್ರಾಧ್ಯಾಪಕರಾದ ನವೀನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ತಂಡ ಮಂಗಳಾದೇವಿ ರಥಬೀದಿಯ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿಗಳು ಮುಂತಾದ ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು. ಮಂಗಳಾದೇವಿ ಸೇವಾಸಮಿತಿಯ ಸದಸ್ಯರು, ಅಂಬಾ ಮಹೇಶ್ವರಿ ಸೇವಾಸಮಿತಿಯ ಸದಸ್ಯರು ಹಾಗೂ ರಾಮಕೃಷ್ಣ ಮಿಷನ್ ನ ನಿವೇದಿತಾ ಬಳಗದ ಸದಸ್ಯರು ಈ ಕಾರ್ಯದಲ್ಲಿ ಕೈ ಜೋಡಿಸಿದರು. ಸ್ವಯಂಸೇವಕರಾದ ಅಭಿಷೇಕ್ ವಿ ಸುಧಾಕರ್, ಉದಯ್ ಕೆ. ಪಿ., ತಾರಾನಾಥ್ ಆಳ್ವ, ಸುನಂದಾ ಶಿವರಾಮ್, ಶಿವರಾಮ್ ನೇತೃತ್ವದಲ್ಲಿ ಎ. ಜೆ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಂಗಳಾದೇವಿಯಿಂದ ಪಾಂಡೇಶ್ವರ ಕಡೆಗೆ ತೆರಳುವ ರಸ್ತೆಯನ್ನು ಪೌರಕಾರ್ಮಿಕರ ಜೊತೆಗೂಡಿ ಸ್ವಚ್ಛಗೊಳಿಸಿದರು.
2023 ರ ಒಕ್ಟೋಬರ್ 2 ರಂದು ಸ್ವಚ್ಛಾಂಜಲಿ ಎಂಬ ಕಾರ್ಯಕ್ರಮದೊಂದಿಗೆ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ಆರಂಭಗೊಂಡ ಎರಡನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನವು ನಿರಂತರವಾಗಿ ಹನ್ನೆರಡು ತಿಂಗಳುಗಳ ಕಾಲ ಒಂದು ಜನಾಂದೋಲನವಾಗಿ ನಡೆಯಿತು. ಮೊದಲ ಅಭಿಯಾನವು ಮಂಗಳೂರಿನ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ಆರಂಭಗೊಂಡು, ನಂತರದಲ್ಲಿ ಕ್ರಮವಾಗಿ ಪಂಪವೆಲ್ ನ ಮಹಾವೀರ ವೃತ್ತ, ಮಂಗಳಾದೇವಿ ದೇವಸ್ಥಾನ, ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ, ಪಾಂಡೇಶ್ವರದ ರೊಸಾರಿಯೋ ಚರ್ಚ್ ರಸ್ತೆ, ಕೊಟ್ಟಾರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಬಳಿಯ ಮಿಯಾವಾಕಿ ಆವರಣ, ಎಕ್ಕೂರು ಬಸ್ ನಿಲ್ದಾಣದ ಪರಿಸರ, ಕೊಟ್ಟಾರ ಚೌಕಿ, ಕೂಳೂರಿನ ಹಿಂದೂ ರುದ್ರಭೂಮಿ, ವಾಮಂಜೂರಿನ ಪಚ್ಚನಾಡಿ ಹಾಗೂ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ನಿರಂತರವಾಗಿ ಪ್ರತಿ ತಿಂಗಳ ಎರಡನೇ ಭಾನುವಾರ ಸ್ವಚ್ಛತಾ ಅಭಿಯಾನವು ನಡೆದಿದೆ.
‘ಒನ್-ಅಪ್ ಕುಡ್ಲ’, ನಮ್ಮೆಲ್ಲರ ಕುಡ್ಲ ಎಂಬ ಶೀರ್ಷಿಕೆಯೊಂದಿಗೆ ಮಂಗಳೂರು ನಗರದಾದ್ಯಂತ ವಿವಿಧ ಸಾರ್ವಜನಿಕ ಸ್ಥಳಗಳ ಸುಂದರರೀಕರಣಕ್ಕೆ ಈ ಹಂತದಲ್ಲಿ ಒತ್ತು ನೀಡಲಾಗಿತ್ತು. ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿ ಮಲಮೂತ್ರ ವಿಸರ್ಜನೆ ಮುಂತಾದವುಗಳಿಂದ ಮಲಿನಗೊಂಡಿದ್ದ ಆವರಣ ಗೋಡೆಯನ್ನು ಸ್ವಚ್ಛಗೊಳಿಸಿ ಸುಂದರ ವರ್ಲಿ ಚಿತ್ರಗಳನ್ನು ಬಿಡಿಸಲಾಯಿತು. ಕೊಟ್ಟಾರ ಚೌಕಿಯ ಪಿಲ್ಲರ್ ಗಳಲ್ಲಿ ಮಾಸಿ ಹೋಗಿದ್ದ ವರ್ಣಚಿತ್ರಗಳ ಮರು ಪೇಂಟಿಂಗ್ ಕಾರ್ಯ ಈ ಅಭಿಯಾನದಲ್ಲಿ ನಡೆಸಲಾಯಿತು. ಎಕ್ಕೂರು ಹಾಗೂ ಪಂಜಿಮೊಗರು ಪ್ರದೇಶಗಳಲ್ಲಿ ಶಿಥಿಲಗೊಂಡಿದ್ದ ಬಸ್ ತಂಗುದಾಣಗಳನ್ನು ನವೀಕರಣಗೊಳಿಸಿ ಜನರಿಗೆ ಅನುಕೂಲವಾಗುವಂತೆ ಒದಗಿಸುವ ಕಾರ್ಯ ಈ ಹಂತದಲ್ಲಿ ನಡೆಯಿತು.
ಮಂಗಳೂರಿನ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಜನಸಂಪರ್ಕ ಅಭಿಯಾನವನ್ನು ಈ ಹಂತದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಜನಸಂಪರ್ಕ ಅಭಿಯಾನದ ಮೂಲಕ ಸುಮಾರು 5000 ಮನೆಗಳು ಒಳಗೊಂಡಂತೆ ರಿಕ್ಷಾ, ಬಸ್ ನಿಲ್ದಾಣ, ಅಂಗಡಿಮುಂಗಟ್ಟುಗಳು ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಇದರಲ್ಲಿ ನಡೆದಿದೆ.
ಅಭಿಯಾನದುದ್ದಕ್ಕೂ ಮಂಗಳೂರು ಮಹಾನಗರ ಪಾಲಿಕೆ, ಮಂಗಳಾದೇವಿ ಸೇವಾಸಮಿತಿ, ರೊಸಾರಿಯೋ ಚರ್ಚ್ ಸಮಿತಿ, ಅಂಚೆ ಇಲಾಖೆ ಸಿಬ್ಬಂದಿಗಳು, ವಿದ್ಯಾನಗರ ಶಾರದಾ ಸೇವಾ ಟ್ರಸ್ಟ್, ಹಿಂದು ಯುವಸೇನೆ ವಿದ್ಯಾನಗರ ಶಾಖೆ, ಕೂಳೂರು ಹಿಂದು ರುದ್ರಭೂಮಿ ಸಮಿತಿ, ಮಂಗಳೂರು ವಿಶ್ವವಿದ್ಯಾನಿಲಯ ಕ್ರಿಶ್ಚಿಯನ್ ಪೀಠ, ಮಂಗಳಜ್ಯೋತಿ ಸಂಯುಕ್ತ ಶಾಲೆ, ಜೆಪ್ಪು ಸಂತ ಜೋಸೆಫ್ ಸೆಮಿನಾರಿ, ಶ್ರೀರಾಮ್ ಟ್ರಾನ್ಸ್ಪೋರ್ಟ್ಸ್, ಶ್ರೀನಿವಾಸ ಫೈನಾನ್ಸ್, ಕೆನೆರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ, ಮಂಗಳಾ ರಿಸೋರ್ಸ್ ಮ್ಯಾನೇಜ್ಮೆಂಟ್ ಪ್ರೈ. ಲಿ., ಸರ್ವಶಕ್ತಿ ಮಹಿಳಾ ಮಂಡಳಿ, ಸರ್ವಶಕ್ತಿ ಬಾಲ ಭಜನಾ ಕಲಿಕಾ ತಂಡ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ದ. ಕ. ಖಾಸಗಿ ಬಸ್ ಮಾಲಕರ ಸಂಘ, ವನ ಚಾರಿಟೇಬಲ್ ಟ್ರಸ್ಟ್, ನಿವೇದಿತಾ ಬಳಗ, ಆದಿತತ್ವ ಆರ್ಟ್ಸ್, ಅಂಬಾಮಹೇಶ್ವರಿ ಸೇವಾಸಮಿತಿ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳು ಕೈಜೋಡಿಸಿದವು. ನಿಟ್ಟೆ ಫಿಸಿಯೋಥೆರಪಿ ಕಾಲೇಜು, ಮಂಗಳಾ ಸಮೂಹ ಸಂಸ್ಥೆಗಳು, ಎಸ್.ಡಿ.ಎಂ. ಸಮೂಹ ಸಂಸ್ಥೆಗಳು, ಎಜೆ ಸಮೂಹ ಸಂಸ್ಥೆಗಳು, ಶ್ರೀನಿವಾಸ ಸಮೂಹ ಸಂಸ್ಥೆಗಳು, ಕೆನರಾ ಕಾಲೇಜು, ಮ್ಯಾಪ್ಸ್ ಕಾಲೇಜು, ಮುಂತಾದ ವಿದ್ಯಾಸಂಸ್ಥೆಗಳು ಸ್ವಯಂ ಭಾಗಿಯಾದರು. ಈ ಅಭಿಯಾನಕ್ಕೆ ಮಂಗಳೂರಿನ ಪ್ರತಿಷ್ಠಿತ ಎಂ.ಆರ್.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿದೆ.