ಮಂಗಳೂರು: ಉನ್ನತ ಅಧಿಕಾರ ಮತ್ತು ಸ್ಥಾನಮಾನಗಳು ವ್ಯಕ್ತಿಯನ್ನು ಸಮಾಜದಿಂದ ದೂರ ಮಾಡಬಹುದು ಎಂಬ ಮಾತಿಗೆ ಅಪವಾದ ದಂತಿದ್ದವರು ಮುಲ್ಕಿ ಸುಂದರ ರಾಮ ಶೆಟ್ಟಿ. ವಿಜಯ ಬ್ಯಾಂಕ್ ಮೂಲಕ ಕರಾವಳಿಯ ಜನರಿಗೆ ಉದ್ಯೋಗ ನೀಡಿ, ಒಂದು ಇಡೀ ತಲೆಮಾರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಅವರ ಧೈಯಾದರ್ಶಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಮುಲ್ಕಿ ಸುಂದರ ರಾಮ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಸಹಾಯ ಹಸ್ತ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವ್ಯಕ್ತಿಯ ಉದ್ಯೋಗ ಭದ್ರತೆಯೇ ಕುಟುಂಬ ಮತ್ತು ಸಮಾಜದ ಪ್ರಗತಿಗೆ ಮೂಲಾಧಾರ ಎಂದು ನಂಬಿದ್ದ ಶೆಟ್ಟಿಯವರ ಸ್ಮರಣಾರ್ಥ, ಈ ಬಾರಿ ಜಾತಿ-ಧರ್ಮಗಳ ಗಡಿ ಮೀರಿ ಆಯ್ಕೆಯಾದ 300 ಕುಟುಂಬಗಳಿಗೆ ಒಟ್ಟು 50 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ವಿತರಿಸಲಾಗುತ್ತಿದೆ. ಕಠಿಣ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಆಸರೆಯಾಗುವುದು ಮತ್ತು ಅರ್ಹರಿಗೆ ಅವರವರ ಅವಶ್ಯಕತೆಗೆ ಅನುಗುಣವಾಗಿ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಶಿಕ್ಷಣದ ವೆಚ್ಚ ಭರಿಸಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳ ಕನಸು ನನಸು ಮಾಡಲು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ವೈದ್ಯಕೀಯ ಚಿಕಿತ್ಸೆಗೆ ಹಾಗೂ ದಿವ್ಯಾಂಗರ ಘನತೆಯ ಬದುಕಿಗೆ ಈ ನೆರವು ಆಸರೆಯಾಗಲಿದೆ. ಇದರೊಂದಿಗೆ ಮನೆತನದ ಬೆಂಬಲವಿಲ್ಲದ ಹಿರಿಯ ನಾಗರಿಕರು, ಮನೆ ಕಟ್ಟಲು ಅಥವಾ ಮದುವೆ ಮಾಡಲು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವವರನ್ನೂ ಈ ಯೋಜನೆಯಡಿ ಬೆಂಬಲಕ್ಕೆ ಆಯ್ಕೆ ಮಾಡಲಾಗಿದೆ.
ಈ ಸಹಾಯ ಹಸ್ತ ಪ್ರದಾನ ಸಮಾರಂಭವು ಇದೇ ಮಾರ್ಚ್ 14ರಂದು(ಇಂದು) ಬೆಳಿಗ್ಗೆ 10:30 ಗಂಟೆಗೆ ಮುಲ್ಕಿಯ ಸುಂದರ ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ದಾಯ್ಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭಾಗವಹಿಸಲಿದ್ದಾರೆ. ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿರಲಿದ್ದಾರೆ.