image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಯುರ್ವೇದ ಕ್ಷೇತ್ರದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ: ಡಾ. ಎಂ. ಮೋಹನ್ ಆಳ್ವ ಕರೆ

ಆಯುರ್ವೇದ ಕ್ಷೇತ್ರದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ: ಡಾ. ಎಂ. ಮೋಹನ್ ಆಳ್ವ ಕರೆ

ಮೂಡುಬಿದಿರೆ: ಆಯುರ್ವೇದ ಕ್ಷೇತ್ರದಲ್ಲಿ ಇಂದು ಜಾಗತಿಕ ಮಟ್ಟದಲ್ಲಿ ಅಪಾರ ಅವಕಾಶಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 2022–23ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಂಪನ್ನಮ್–2026’ ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾಭ್ಯಾಸದ ಜೊತೆಗೆ ನಿರಂತರ ಅಭ್ಯಾಸ ಮತ್ತು ಪರಿಶ್ರಮವಿದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಖಚಿತ. ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಇಂದು ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಕೇವಲ ಚಿಕಿತ್ಸೆಗೆ ಸೀಮಿತವಾಗದೆ, ಸಂಶೋಧನೆಯ ಮೂಲಕ ಹೊಸ ಔಷಧಿಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವದೇಶಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಆಯುರ್ವೇದ ಸಸ್ಯಗಳನ್ನು ಬೆಳೆಸಲು ದೊಡ್ಡ ಮಟ್ಟದ ಅನುದಾನ ಲಭ್ಯವಿದೆ. ಶೂನ್ಯದಿಂದ ಆರಂಭವಾದ ತಮ್ಮ ಜೀವನದ ಪಯಣ ಇಂದು ಆಯುರ್ವೇದ ಕ್ಷೇತ್ರಕ್ಕೆ ಕೊಡುಗೆ ನೀಡುವ ಮಟ್ಟಕ್ಕೆ ಬೆಳೆದಿರುವುದನ್ನು ಸ್ಮರಿಸಿದ ಅವರು, ಸಾಧನೆಗಾಗಿ ತ್ಯಾಗ ಮತ್ತು ಕಠಿಣ ಶ್ರಮ ಅನಿವಾರ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಡಾ. ಕೃಷ್ಣಕುಮಾರ್ ಯಾದವ್, ಡಾ. ನೇಹಾನ್ ಮತ್ತು ಡಾ. ಅಶ್ವಿತಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ, ಪದವಿ ವಿಭಾಗದ ಡೀನ್ ಡಾ. ಸ್ವಪ್ನ ಕುಮಾರಿ, ಹಾಗೂ ಆತ್ಮ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸುಬ್ರಹ್ಮಣ್ಯ ಪದ್ಯಾಣ ಉಪಸ್ಥಿತರಿದ್ದರು. ಡಾ. ಗೀತಾ ಬಿ. ಮಾರ್ಕಂಡೆ ಕಾರ್ಯಕ್ರಮ ನಿರೂಪಿಸಿ, ಡಾ. ಸುಶೀಲ್ ಶೆಟ್ಟಿ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ ಭಟ್ ವಂದಿಸಿದರು.

Category
ಕರಾವಳಿ ತರಂಗಿಣಿ