ಮಂಗಳೂರು: ಹೋಟೆಲ್, ಕ್ಯಾಂಟೀನ್ ಹಾಗೂ ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ವಾರ್ತಾ ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ತಕ್ಷಣವೇ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರಾಜು ಕೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರಕ್ಕೆ ಸೇರಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿವೆ. ಹೋಟೆಲ್ ಮತ್ತು ಕ್ಯಾಂಟೀನ್‌ಗಳಿಂದ ಹೆಚ್ಚಾಗಿ ಕಾರ್ಮಿಕರು ಅಥವಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬಿಸಿ ಆಹಾರವನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್ ಹಾಗೂ ನ್ಯೂಸ್ ಪೇಪರ್‌ಗಳಲ್ಲಿ ಬಿಸಿ ಆಹಾರ ಪದಾರ್ಥಗಳ ಪ್ಯಾಕಿಂಗ್ ಅನ್ನು ಕಡ್ಡಾಯವಾಗಿ ನಿಷೇಧಿಸಲು ಅವರು ಸೂಚಿಸಿದರು.
ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ಗುಟ್ಕಾ ಜಗಿದು ಉಗುಳುವವರಿಗೆ 1,000 ರೂಪಾಯಿ ವರೆಗೆ ದಂಡ ವಿಧಿಸಲು ಎಡಿಸಿ ಸೂಚನೆ ನೀಡಿದರು. ಅಂಗಡಿ ಅಥವಾ ಹೋಟೆಲ್‌ಗಳಲ್ಲಿ ಸಿಗರ್ ಲೈಟರ್, ಬೆಂಕಿ ಪೊಟ್ಟಣಗಳನ್ನು ಇಟ್ಟರೆ ಅಥವಾ 21 ವರ್ಷದೊಳಗಿನವರಿಗೆ ತಂಬಾಕು ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಮಾರಾಟ ಮಾಡುವುದನ್ನು ತಡೆಯಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಿಗಾವಹಿಸಬೇಕು ಮತ್ತು ಅಂತಹ ಅಂಗಡಿಗಳ ಪಟ್ಟಿಯನ್ನು ಸ್ಥಳೀಯಾಡಳಿತ ಹಾಗೂ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕೋಟ್ಪಾ ಕಾರ್ಯಾಚರಣೆಯಡಿ ಇದುವರೆಗೆ 2,587 ಪ್ರಕರಣ ದಾಖಲಿಸಿ 3.89 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ. 85 ಕ್ಕಿಂತ ಕಡಿಮೆ ಅಳತೆಯ ಆರೋಗ್ಯ ಎಚ್ಚರಿಕೆ ಚಿತ್ರಗಳಿದ್ದರೆ ಅಂತಹವುಗಳ ಮೇಲೆಯೂ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.