ಉಜಿರೆ: ಉಡುಪಿಯ ಅಷ್ಟಮಠಗಳಲ್ಲೊಂದಾದ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಬುಧವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಪೂಜ್ಯ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳು ಮೊದಲು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಸಂಪ್ರದಾಯದಂತೆ ಅವರಿಗೆ ಗೌರವ ಸಮರ್ಪಿಸಲಾಯಿತು.
ಬಳಿಕ ಹೆಗ್ಗಡೆಯವರ ನಿವಾಸವಾದ 'ಬೀಡು'ಗೆ ಶ್ರೀಗಳು ಆಗಮಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪೂಜ್ಯ ಸ್ವಾಮೀಜಿಯವರನ್ನು ಭಕ್ತಿಯಿಂದ ಬರಮಾಡಿಕೊಂಡು ಪಾದಪೂಜೆ ನೆರವೇರಿಸಿದರು. ನಂತರ ಶ್ರೀಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಆತ್ಮೀಯವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರೇಯಸ್ ಕುಮಾರ್ ಅವರು ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.