ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 57ನೇ ಹೊಯ್ಗೆಬಜಾರ್ ವಾರ್ಡ್‌ನ ನಿವಾಸಿಗಳ ದೀರ್ಘಕಾಲದ ಬೇಡಿಕೆಯಾಗಿದ್ದ ಕೆ.ಎನ್. ಬೋರ್ಡ್ ಯಾರ್ಡ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಇತ್ತೀಚಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 1 ಕೋಟಿ ರೂ. ಅನುದಾನದಲ್ಲಿ ಈ ರಸ್ತೆಯು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳ್ಳಲಿದ್ದು,
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, "ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ಹಲವು ಪ್ರಮುಖ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಕಾಂಗ್ರೆಸ್ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳಿಗೆ ತಡೆ ನೀಡಿತ್ತು. ಇದರಿಂದಾಗಿ ಕಾಮಗಾರಿಗಳು ಅರ್ಧಕ್ಕೆ ನಿಂತು ಸಾರ್ವಜನಿಕರಿಗೆ ತೊಂದರೆಯಾಗಿತ್ತು," ಎಂದು ಅಸಮಾಧಾನ ವ್ಯಕ್ತಪಡಿಸಿದರು. "ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರಲ್ಲಿ ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿ, ಅಭಿವೃದ್ಧಿಯ ಅಗತ್ಯವನ್ನು ಮನವರಿಕೆ ಮಾಡಿಕೊಡಲಾಗಿತ್ತು. ಇದರ ಫಲವಾಗಿ ಈಗ ತಡೆ ಹಿಡಿಯಲಾಗಿದ್ದ ಅನುದಾನಗಳು ಬಿಡುಗಡೆಗೊಂಡಿದ್ದು, ಶೀಘ್ರದಲ್ಲೇ ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದೆ," ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ರೇವತಿ ಶ್ಯಾಂ ಸುಂದರ್ ಶೆಟ್ಟಿ, ಪ್ರಮುಖರಾದ ದೀಪಕ್ ಪೈ, ಅಮಿತ್, ಶಬರಿ ಶೆಟ್ಟಿ, ಶೈಲೇಶ್ ಶೆಟ್ಟಿ, ಅರುಣ್ ಕೊಟ್ಟಾರಿ, ಅನಿಲ್ ಕೊಟ್ಟಾರಿ, ಜಯಶ್ರೀ ಕೊಟ್ಟಾರಿ, ದೀಪಕ್ ಸುವರ್ಣ, ಉಷಾ, ಗಾಯತ್ರಿ, ಸುರೇಶ್, ಪ್ರವೀಣ್ ನಿಡ್ಡೆಲ್, ಲಲಿತಾ ಕೊಟ್ಟಾರಿ, ನಿತಿನ್, ವಿಖ್ಯಾತ್ ಶೆಟ್ಟಿ, ವಿನಯ್ ಸೇರಿದಂತೆ ವಾರ್ಡಿನ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.