ಮಂಗಳೂರು: ಇಲ್ಲಿನ ಪುಣ್ಯಕ್ಷೇತ್ರವಾದ ಅದ್ಯಪಾಡಿಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ ನಾಲ್ಕನೇ ಸಲದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಇದೇ ಮಾರ್ಚ್ 15 ರಿಂದ 20ರ ವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಾಜಿ ಮಂತ್ರಿ ನಾಗರಾಜ ಶೆಟ್ಟಿ ತಿಳಿಸಿದರು. ದೇವಾಲಯದ ಪ್ರಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವು ಸದ್ಯ ಆಡಳಿತ ಮೊಕ್ತೇಸರರಾದ ಎ. ಮಂಜುನಾಥ ಭಂಡಾರಿ ಶೆಟ್ಟಿ ಹಾಗೂ ಕುಟುಂಬಸ್ಥರ ನೇತೃತ್ವದಲ್ಲಿ ಭಕ್ತರ ಶ್ರದ್ಧಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಸನಾತನ ಧರ್ಮದ ಸಂಪ್ರದಾಯದಂತೆ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಬ್ರಹ್ಮಕಲಶೋತ್ಸವಕ್ಕೆ ಈಗ ಕ್ಷೇತ್ರವು ಸಜ್ಜಾಗುತ್ತಿದೆ.
ಈ ಬಾರಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ದಾನಿಗಳ ಸಹಕಾರದೊಂದಿಗೆ ಇವು ಪೂರ್ಣಗೊಳ್ಳುವ ಹಂತದಲ್ಲಿವೆ. ವಿಶೇಷವೆಂದರೆ, ಈ ದೇವಸ್ಥಾನವು ಕಳೆದ 25 ವರ್ಷಗಳಿಂದ ಮದುವೆ, ಉಪನಯನ ಮುಂತಾದ ಶುಭ ಕಾರ್ಯಗಳಿಗಾಗಿ ತನ್ನ 18,000 ಚದರ ಅಡಿಯ ವಿಶಾಲ ಸಭಾಂಗಣ, ಆಸನ ವ್ಯವಸ್ಥೆ ಹಾಗೂ ಪಾಕಶಾಲೆಯನ್ನು ಉಚಿತವಾಗಿ ನೀಡುತ್ತಾ ಸಾಮಾಜಿಕ ಬದ್ಧತೆಯನ್ನು ಮೆರೆಯುತ್ತಿದೆ ಎಂದರು.
ಮಾರ್ಚ್ 15 ರಿಂದ 20ರ ವರೆಗೆ ನಡೆಯುವ ಆರು ದಿನಗಳ ಕಾಲದ ಈ ಧಾರ್ಮಿಕ ಉತ್ಸವದಲ್ಲಿ ಪ್ರತಿದಿನವೂ ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆ ಉಪಾಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ಈ ಪವಿತ್ರ ಕಾರ್ಯಕ್ರಮದಲ್ಲಿ ಊರ ಪರವೂರ ಸಮಸ್ತ ಭಕ್ತ ಬಂಧುಗಳು ಸಕುಟುಂಬ ಪರಿವಾರ ಸಮೇತ ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮೊಕ್ತೇಸರರಾದ ಎ. ಮಂಜುನಾಥ ಭಂಡಾರಿ ಶೆಡ್ಡೆ ಹಾಗೂ ಆಡಳಿತ ಮಂಡಳಿಯ ಪರವಾಗಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶೆಡ್ಡೆ ಮಂಜುನಾಥ ಭಂಡಾರಿ, ಮಾಲಾಡಿ ಅಜಿತ್ ಕುಮಾರ್ ರೈ, ಭುಜಂಗ ಶೆಟ್ಟಿ, ರಾಜೀವ ಆಳ್ವಾ, ರಾಮನಾಥ ಅತ್ತಾರ್, ದೇವದಾಸ್ ನಾಯಕ್, ಆಶಾಜ್ಯೋತಿ ರೈ, ದಿವಾಕರ್ ಸಾಮಾನಿ ಮತ್ತು ವಿಷ್ಣುಮೂರ್ತಿ ಉಪಸ್ಥಿತರಿದ್ದರು.