ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ ಕೇವಲ ಅಂಕಿ-ಅಂಶಗಳ ಆಟವಾಗಿದ್ದು, ರಾಜ್ಯದ ಆರ್ಥಿಕ ಭವಿಷ್ಯವನ್ನು ಅಪಾಯಕ್ಕೆ ತಳ್ಳಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತೀವ್ರವಾಗಿ ಟೀಕಿಸಿದ್ದಾರೆ. ಈ ಬಜೆಟ್ ವಿತ್ತೀಯ ಶಿಸ್ತಿಲ್ಲದ ಮತ್ತು ಕರಾವಳಿ ಭಾಗದ ಆಶೋತ್ತರಗಳನ್ನು ಕಡೆಗಣಿಸಿದ "ದೂರದೃಷ್ಟಿಹೀನ" ದಾಖಲೆ ಎಂದು ಅವರು ಬಣ್ಣಿಸಿದ್ದಾರೆ.
ಬಜೆಟ್‌ನ ಪ್ರಮುಖ ವಿಮರ್ಶೆಗಳು:
ಆರ್ಥಿಕ ದಿವಾಳಿತನ: ಬಜೆಟ್‌ನಲ್ಲಿ ದಾಖಲಾಗಿರುವ 22,000 ಕೋಟಿ ರೂ.ಗಳ ಬೃಹತ್ ರೆವೆನ್ಯೂ ಕೊರತೆಯು ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ. ದಿನನಿತ್ಯದ ವೆಚ್ಚಗಳಿಗೂ ಸಾಲದ ಹಣವನ್ನೇ ಅವಲಂಬಿಸಿರುವುದು ಕಳವಳಕಾರಿ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 17 ಬಾರಿ ಬಜೆಟ್ ಮಂಡಿಸಿದ ಅನುಭವವಿರುವ ಮುಖ್ಯಮಂತ್ರಿಗಳು, ಬಂಡವಾಳ ಆದಾಯವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸುವ ಬದಲು ದೈನಂದಿನ ಖರ್ಚಿಗೆ ವ್ಯಯಿಸುತ್ತಿರುವುದು ರಾಜ್ಯದ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಚೌಟ ಹೇಳಿದ್ದಾರೆ.
ಮಂಗಳೂರನ್ನು ಬೆಂಗಳೂರಿಗೆ ಪರ್ಯಾಯವಾಗಿ ಅಂತರಾಷ್ಟ್ರೀಯ ಐಟಿ ಹಬ್ ಆಗಿ ರೂಪಿಸುವ ಎಲ್ಲ ಸೌಲಭ್ಯಗಳಿದ್ದರೂ, ಸರ್ಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ. ಇದು ಸರ್ಕಾರದ ಪ್ರಾದೇಶಿಕ ಅಸಮತೋಲನ ನೀತಿಗೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಜಿಎಸ್‌ಟಿ ಸಂಗ್ರಹದ ಗುರಿಯಲ್ಲಿ 14,000 ಕೋಟಿ ರೂ.ಗಳಷ್ಟು ಖೋತಾ ಕಂಡುಬಂದಿರುವುದು ರಾಜ್ಯದ ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ. "ಮಂಗಳೂರು ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವಿನ ನಿಕಟ ಸಂಪರ್ಕವನ್ನು ಬಳಸಿಕೊಂಡು ಇಲ್ಲಿ ಐಟಿ ಹಬ್ ನಿರ್ಮಿಸಿದ್ದರೆ ಅನಿವಾಸಿ ಭಾರತೀಯರ ಹೂಡಿಕೆಗೆ ದೊಡ್ಡ ಪ್ರೋತ್ಸಾಹ ಸಿಗುತ್ತಿತ್ತು. ಆದರೆ ಸರ್ಕಾರ ಈ ಅವಕಾಶವನ್ನು ಕೈಚೆಲ್ಲಿದೆ." - ಕ್ಯಾ. ಬ್ರಿಜೇಶ್ ಚೌಟ
ರೈತರ ಹಿತರಕ್ಷಣೆ ಮತ್ತು ಬಾಕಿ ಉಳಿದ ಭರವಸೆಗಳು:
ಅಡಿಕೆ ಮತ್ತು ತೆಂಗಿನ ರೋಗ ನಿಯಂತ್ರಣಕ್ಕೆ 10 ಕೋಟಿ ರೂ. ಮೀಸಲಿಟ್ಟಿರುವುದನ್ನು ಸ್ವಾಗತಿಸಿದ ಸಂಸದರು, ಇದು ಕೇವಲ ಘೋಷಣೆಯಾಗದೆ ಕೂಡಲೇ ರೈತರ ಕೈ ಸೇರಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಜಿಲ್ಲೆಗೆ ಈ ಹಿಂದೆ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜಿಗೆ ಅನುದಾನ ಪ್ರಸ್ತಾಪಿಸದಿರುವುದು ಕರಾವಳಿ ಜನತೆಗೆ ಮಾಡಿದ ವಂಚನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.